ಈ ವರ್ಷದಿಂದಲೇ ರಾಯಚೂರಿನಲ್ಲಿ 'ಐಐಐಟಿ’ ತರಗತಿಗಳು: ಡಿಸಿಎಂ ಅಶ್ವಥ್ ನಾರಾಯಣ

Update: 2020-02-25 16:41 GMT

ರಾಯಚೂರು, ಫೆ.25: ಐಐಐಟಿ ತರಗತಿಗಳನ್ನು ಈ ಶೈಕ್ಷಣಿಕ ವರ್ಷದಿಂದಲೆ ಇಲ್ಲಿನ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಾರಂಭ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದರು.

ಮಂಗಳವಾರ ಐಐಐಟಿ ರಾಯಚೂರು ಕ್ಯಾಂಪಸ್‌ಗೆ ನಿಗದಿಯಾಗಿರುವ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಯುವಜನರ ಶಿಕ್ಷಣ ಮತ್ತು ಉದ್ಯೋಗದ ನಿರೀಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ ಎಂದರು.

ಜಾಗದ ಸಮಸ್ಯೆ ಇದ್ದ ಕಾರಣಕ್ಕೆ ರಾಯಚೂರಿನ ಐಐಐಟಿ ಅನ್ನು ಹೈದರಾಬಾದ್‌ನಲ್ಲಿ ಕಳೆದ ವರ್ಷ ಆರಂಭಿಸಲಾಗಿತ್ತು. ಅಲ್ಲಿ ಮೊದಲ ವರ್ಷ ಮುಗಿಸಿದ ವಿದ್ಯಾರ್ಥಿಗಳಿಗೆ ಎರಡನೆ ವರ್ಷದ ತರಗತಿಗಳು ಇಲ್ಲಿ ಆರಂಭವಾಗಲಿವೆ ಎಂದು ಅವರು ಹೇಳಿದರು.

ಈಗಾಗಲೆ 65 ಎಕರೆ ಭೂ ಸ್ವಾಧೀನ ಆಗಿದ್ದು, ನೋಂದಣಿ ಹಾಗೂ ಭೂ ದಾಖಲೆ ಹಸ್ತಾಂತರವೂ ಆಗಿದೆ. ಇದರ ಜತೆಗೆ 56 ಎಕರೆ ಸರಕಾರಿ ಜಾಗವೂ ಲಭ್ಯ ಇದೆ. ಅಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಪರ್ಯಾಯ ಭೂಮಿ ನೀಡಲಾಗುವುದು ಎಂದು ಅಶ್ವಥ್ ನಾರಾಯಣ ತಿಳಿಸಿದರು.

ನಿಗದಿಯಾಗಿರುವ ಕ್ಯಾಂಪಸ್ ಜಾಗದ ಜತೆಗೆ ನಗರದ ಮಧ್ಯ ಭಾಗದಲ್ಲಿ ಐಐಐಟಿ ಹಾಗೂ ವಿಶ್ವವಿದ್ಯಾಲಯಕ್ಕೆ ಸ್ವಲ್ಪಜಾಗ ದೊರೆತರೆ ಅಲ್ಲಿ ಸ್ಟಾರ್ಟ್‌ಅಪ್, ಉತ್ಪಾದನಾ ಕೇಂದ್ರಗಳನ್ನು ಆರಂಭಿಸಲು ಅನುಕೂಲವಾಗುವುದು. ಸಂಶೋಧನೆ, ಆವಿಷ್ಕಾರ ನಡೆಯುವ ಜ್ಞಾನ ಕೇಂದ್ರ ಐಐಐಟಿ, ಉದ್ಯಮ, ವ್ಯವಸಾಯ, ಆರೋಗ್ಯ ಸೇರಿದಂತೆ ಯಾವುದೆ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಲ್ಲ ಕೇಂದ್ರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಯಚೂರು ಇಂಜಿನಿಯರಿಂಗ್ ಕಾಲೇಜಿನ ನವೀಕರಣಕ್ಕೆ 2.5 ಕೋಟಿ ರೂ. ನೀಡಲಾಗಿದ್ದು, ಇದರ ಜತೆಯಲ್ಲೆ ಐಐಐಟಿ ಕ್ಯಾಂಪಸ್ ಆಗಲಿದೆ. ಪ್ರತಿಭಾನ್ವಿತರಿಗೆ ಸ್ಥಳೀಯವಾಗಿ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಮತ್ತು ರಾಜ್ಯದಿಂದ 50-50ರ ಅನುಪಾತದಲ್ಲಿ ಅನುದಾನ ನೀಡಲಾಗುವುದು. ಯೋಜನೆಯ ಒಟ್ಟು ವೆಚ್ಚ 125 ಕೋಟಿ ರೂ. ಐಐಐಟಿ ಕಟ್ಟಡ ನಿರ್ಮಾಣ ವೆಚ್ಚ ಒಂದು ಭಾಗವಾದರೆ, ನಿಯಮಿತ ಖರ್ಚು ವೆಚ್ಚಗಳಿಗೆ ಪ್ರತಿ ವರ್ಷ 11 ಕೋಟಿ ರೂ. ನೀಡಲಾಗುವುದು ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಸಂಸದ ರಾಜ ಅಮರೇಶ್ವರ ನಾಯಕ್, ಶಾಸಕರಾದ ಶಿವರಾಜ್ ಪಾಟೀಲ್, ರಾಜ ವೆಂಕಟಪ್ಪನಾಯಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News