ಬೆಳಗಾವಿಗೆ ಸುಸಜ್ಜಿತ ಮೀನು ಮಾರುಕಟ್ಟೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-02-25 16:54 GMT

ಬೆಳಗಾವಿ, ಫೆ.25: ಬೆಳಗಾವಿ ಜಿಲ್ಲೆಯ ಎಲ್ಲ ಕೆರೆಗಳ ಸಮೀಕ್ಷೆ ನಡೆಸಿ ಮೀನು ಬಿತ್ತನೆ ಹಾಗೂ ಆದಾಯ ಪ್ರಮಾಣ ಸೇರಿದಂತೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿವರ್ಷದ ಮೀನು ಉತ್ಪಾದನೆ ಪ್ರಮಾಣ, ಆದಾಯ ಮತ್ತು ಸರಕಾರದ ಸೌಲಭ್ಯಗಳ ವಿತರಣೆ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿಯನ್ನು ಹೊಂದಿರಬೇಕು. ಹೀಗಿದ್ದಾಗ ಮಾತ್ರ ಲಭ್ಯವಿರುವ ಕೆರೆಗಳನ್ನು ಅರ್ಹ ಮೀನುಗಾರ ಕುಟುಂಬಗಳಿಗೆ ಹಂಚಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಸರಕಾರದ ವತಿಯಿಂದ ಬಲೆ ಮತ್ತು ಹರಿಗೋಲು ವಿತರಣೆ ಮಾಡುವಾಗ ಆಯಾ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಕೆಲಸ ಕಡಿಮೆ ಇರುವ ತಾಲೂಕುಗಳಲ್ಲಿ ಇರುವ ಅಧಿಕಾರಿಗಳು ಇಡಿ ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸವನ್ನು ಮಾಡಬೇಕು ಎಂದು ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದರು.

ಪ್ರತಿಯೊಬ್ಬ ಅಧಿಕಾರಿಗಳು ಶಾಸಕರನ್ನು ಕಡ್ಡಾಯವಾಗಿ ಭೇಟಿ ಮಾಡಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ಸೌಲಭ್ಯ ಹಂಚಿಕೆ ಹಾಗೂ ಗುರಿ ಸಾಧನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

220 ಕೆರೆಗಳಲ್ಲಿ ಮೀನು ಅಭಿವೃದ್ಧಿ ಕಾರ್ಯ ನಡೆದಿದ್ದು, ಇದರಲ್ಲಿ 84 ಕೆರೆಗಳಲ್ಲಿ ಇಡಿ ವರ್ಷ ನೀರು ಲಭ್ಯವಿರುವುದಿಲ್ಲ. ಮೀನಗಾರರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನಿಸಿ ಒಂದು ಸಂಘಕ್ಕೆ ಗರಿಷ್ಠ ಮೂರು ಕೆರೆಗಳನ್ನು ಗುತ್ತಿಗೆ ನೀಡಬಹುದು ಎಂದು ಅಧಿಕಾರಿಗಳಿಗೆ ವಿವರಿಸಿದರು.

ಅತಿಕ್ರಮಣ ತೆರವಿಗೆ ಸೂಚನೆ: ರಾಯಬಾಗದಲ್ಲಿರುವ ಮೀನುಗಾರಿಕೆ ಇಲಾಖೆಯ 20 ಗುಂಟೆ ಕಚೇರಿಯ ಆವರಣದಲ್ಲಿ ಕೆಲವರು ಅತಿಕ್ರಮ ಮಾಡಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಸಭೆಯಲ್ಲಿ ಸಚಿವರ ಎದುರು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀನಿವಾಸ್ ಪೂಜಾರಿ, ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಒಂದು ವೇಳೆ ಅತಿಕ್ರಮಣ ತೆರವುಗೊಳಿಸದಿದ್ದರೆ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಶ್ನಿಸುತ್ತೇನೆ ಎಂದು ದುರ್ಯೋಧನ ಐಹೊಳೆ ಹೇಳಿದರು.

ಹಿಡಕಲ್ ಜಲಾಶಯದಲ್ಲಿ ಇಲಾಖೆಯ ವತಿಯಿಂದ 9.44 ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ. ಮಲಪ್ರಭಾ 4.72 ಲಕ್ಷ ಮರಿಗಳನ್ನು ಬಿಡಲಾಗಿದೆ. ಮಾರ್ಕಂಡೇಯ ಜಲಾಶಯದಲ್ಲಿ 1.44 ಲಕ್ಷ ಮರಿಗಳನ್ನು ಬಿಡಲಾಗಿದೆ. ಕೃಷಿ ಹೊಂಡದಲ್ಲಿ ಮೀನುಮರಿಗಳನ್ನು ಬಿಡಲು ಸರಕಾರ ನಿರ್ದೇಶನ ನೀಡಿದ್ದು, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್.ವಿ.ಕುಲಕರ್ಣಿ ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅನಿಲ್ ಬೆನಕೆ, ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ರವೀಂದ್ರ ಕರಲಿಂಗಣ್ಣವರ, ಸವದತ್ತಿ ಎಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News