"ನೀನು ಹಿಂದೂವಾದ ಕಾರಣ ಬಚಾವಾದೆ": ದಿಲ್ಲಿಯಲ್ಲಿ ಗೂಂಡಾಗಳ ಭಯಾನಕ ದಾಳಿಯನ್ನು ವಿವರಿಸಿದ ಪತ್ರಕರ್ತ

Update: 2020-02-26 10:37 GMT

ದಿಲ್ಲಿ ಹಿಂಸಾಚಾರದ ವರದಿ ಮಾಡಲು ತೆರಳಿದ್ದ indianexpress.com ವರದಿಗಾರ ಶಿವನಾರಾಯಣ್ ರಾಜಪುರೋಹಿತ್ ಅಲ್ಲಿ ಉದ್ರಿಕ್ತ ಗುಂಪೊಂದು ತನ್ನ ಮೇಲೆ ಹಲ್ಲೆಗೈದು, ಫೋನ್ ಸೆಳೆದು ಕನ್ನಡಕಗಳನ್ನು ಪುಡಿಗಟ್ಟಿದ ಭಯಾನಕ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

"ಸಮಯ ರಾತ್ರಿ ಒಂದು ಗಂಟೆಯಾಗಿರಬಹುದು. ಈಶಾನ್ಯ ದಿಲ್ಲಿಯ ಪಶ್ಚಿಮ ಕರವಲ್ ನಗರದ ರಸ್ತೆ ಮಧ್ಯದಲ್ಲಿಯೇ  ಬೇಕರಿಯೊಂದರ ತಿಂಡಿ ತಿನಿಸು, ಪೀಠೋಪಕರಣಗಳು ಹೊತ್ತಿ ಉರಿಯುತ್ತಿರುವುದನ್ನು ಕಂಡು ಆ ಬೇಕರಿಯ ಮೊಬೈಲ್ ಸಂಖ್ಯೆ ಬರೆದಿಟ್ಟುಕೊಳ್ಳಲೆಂದು ಅಲ್ಲಿ ನಿಂತೆ. ಆಗ ಸುಮಾರು 40 ವರ್ಷ ಪ್ರಾಯದ ವ್ಯಕ್ತಿಯೊಬ್ಬ ನನ್ನ ಬಳಿ ಬಂದು 'ನೀವು ಯಾರು ? ಇಲ್ಲೇನು ಮಾಡುತ್ತಿದ್ದೀರಿ?' ಎಂದು ಕೇಳಿದಾಗ ನಾನೊಬ್ಬ ಪತ್ರಕರ್ತ ಎಂದು ನನ್ನನ್ನು ಪರಿಚಯಿಸಿಕೊಂಡೆ.  'ನಿಮ್ಮ ನೋಟ್ ಬುಕ್ ಕೊಡಿ' ಎಂದು ಕೇಳಿ ಪಡೆದುಕೊಂಡ ಆತ ಅದರ ಪುಟಗಳನ್ನು ತಿರುವಿದ.  ಅದರಲ್ಲಿನ ಕೆಲ ದೂರವಾಣಿ ಸಂಖ್ಯೆಗಳು ಹಾಗೂ ಸ್ಥಳದ ಕುರಿತು ನನ್ನ ಅಭಿಪ್ರಾಯಗಳ ಹೊರತು ಬೇರಿನ್ನೇನೂ ಶಂಕಾಸ್ಪದವಾಗಿ ಆತನಿಗೆ ಕಂಡಂತಿರಲಿಲ್ಲ. 'ನೀವು ಇಲ್ಲಿಂದ ವರದಿ ಮಾಡಲು ಸಾಧ್ಯವಿಲ್ಲ' ಎಂದು ಹೇಳಿ ನನ್ನ ನೋಟ್ ಬುಕ್ ಅನ್ನು ಬೇಕರಿ ಉತ್ಪನ್ನಗಳು ಹೊತ್ತಿ ಉರಿಯುತ್ತಿದ್ದ ಸ್ಥಳದತ್ತವೇ ಎಸೆದುಬಿಟ್ಟ".

"ಇದರ ನಡುವೆ ಸುಮಾರು 50 ಜನರಿದ್ದ ಗುಂಪು ನನ್ನನ್ನು ಸುತ್ತುವರಿದು ನಾನು ಹಿಂಸೆಯ ಫೋಟೋ ಕ್ಲಿಕ್ಕಿಸಿರಬೇಕೆಂದು ತಿಳಿದುಕೊಂಡು ನನ್ನ ಫೋನ್ ಸೆಳೆಯಿತು. ಆದರೆ ಅದರಲ್ಲಿ ಇತ್ತೀಚೆಗೆ ತೆಗೆಯಲಾದ ಯಾವುದೇ ಫೋಟೋ ಹಾಗೂ ವೀಡಿಯೋ ಇಲ್ಲವೆಂದು ತಿಳಿದು ಬಂದರೂ ಫೋನಿನಲ್ಲಿದ್ದ ಎಲ್ಲಾ ಫೋಟೋ  ಹಾಗೂ ವೀಡಿಯೋಗಳನ್ನು ಡಿಲೀಟ್ ಮಾಡಿ ನನಗೆ ವಾಪಸ್ ನೀಡಿದರು. 'ಜೀವದ ಮೇಲೆ ಪ್ರೀತಿಯಿದ್ದರೆ ಇಲ್ಲಿಂದ ಹೋಗಿ' ಎಂದು ಹೇಳಿದರು".

"ಸ್ಥಳದಿಂದ ಸಮಾರು 200 ಮೀಟರ್ ದೂರದಲ್ಲಿ ನಿಲ್ಲಿಸಲಾಗಿದ್ದ ನನ್ನ ಬೈಕ್‍ ನತ್ತ ನಡೆದೆ. ಬೈಕ್ ಇದ್ದ ಗಲ್ಲಿಯನ್ನು ನಾನು ಪ್ರವೇಶಿಸುತ್ತಿದ್ದಂತೆಯೇ ಕೈಗಳಲ್ಲಿ ಲಾಠಿ, ರಾಡ್ ಹಾಗೂ ಸರಳುಗಳನ್ನು ಹಿಡಿದುಕೊಂಡ ಇನ್ನೊಂದು ಗುಂಪು ನನ್ನನ್ನು ಅಡ್ಡಗಟ್ಟಿತು. ನಾನು ಫೋಟೋ ಕ್ಲಿಕ್ಕಿಸಿದ್ದೇನೆ ಎಂದು ಕೆಲವರು ಆರೋಪಿಸಿದರು. ತನ್ನ ಮುಖ ಮುಚ್ಚಿದ್ದ ಯುವಕನೊಬ್ಬ ನನ್ನ ಫೋನ್ ನೀಡುವಂತೆ ಹೇಳಿದ. ಅದರಲ್ಲಿದ್ದ ಎಲ್ಲಾ ಫೋಟೋ ಡಿಲೀಟ್ ಮಾಡಲಾಗಿದೆ ಎಂದು ಆತನಿಗೆ ಫೋನ್ ನೀಡಲು ಹಿಂಜರಿಯುತ್ತಾ ಹೇಳಿದೆ. ಆತ 'ಫೋನ್ ದೇ' ಎಂದು ಬೊಬ್ಬೆ ಹೊಡೆದ. ನಂತರ ನನ್ನ ಹಿಂದೆ ನಿಂತು ಆತನ ಕೈಯ್ಯಲ್ಲಿದ್ದ ರಾಡ್ ಅನ್ನು ಎರಡು ಬಾರಿ ನನ್ನ ತೊಡೆಯಲ್ಲಿರಿಸಿದ. ಅರೆಕ್ಷಣ ನನಗೆ ಭಯವಾಯಿತು. ನನ್ನನ್ನು ನಿಂದಿಸಲಾಯಿತು 'ನಿನಗೆ ಯಾವುದು ಮುಖ್ಯ?, ನಿನ್ನ ಫೋನ್ ಅಥವಾ ಜೀವ?' ಎಂದು ಕೇಳಿದರು. ನಾನು ಫೋನ್ ಅವರಿಗೆ ನೀಡಿದೆ. ಅವರು ಬೊಬ್ಬೆ ಹೊಡೆಯುತ್ತಾ ಅಲ್ಲಿಂದ ಮರೆಯಾದರು".

"ಸ್ವಲ್ಪ ಹೊತ್ತಾಗುವಷ್ಟರಲ್ಲಿ ಇನ್ನೊಂದು ಗುಂಪು ನನ್ನನ್ನು ಹಿಂಬಾಲಿಸಿತು. ಐವತ್ತು ವರ್ಷ ಅಸುಪಾಸಿನ ವ್ಯಕ್ತಿಯೊಬ್ಬ ನನ್ನ ಕನ್ನಡಕಕ್ಕೆ ಕೈ ಹಾಕಿ ಅದನ್ನು ಹೊಸಕಿ ಹಾಕಿ  'ಹಿಂದು ಬಾಹುಳ್ಯ ಪ್ರದೇಶದಿಂದ ವರದಿ ಮಾಡಿದ್ದಕ್ಕೆ' ನನ್ನ ಕೆನ್ನೆಗೆ ಎರಡು ಬಾರಿ  ಬಾರಿಸಿದ. ಅವರು ನನ್ನ ಪ್ರೆಸ್ ಕಾರ್ಡ್ ಅನ್ನು  ಪರೀಕ್ಷಿಸಿ ``ಶಿವನಾರಾಯಣ್  ರಾಜಪುರೋಹಿತ್, ನೀನು  ಹಿಂದು ಧರ್ಮದವನೇ? ಬಚಾವಾದೆ'' ಎಂದರು. ಆದರೂ ನಾನು ನಿಜವಾದ ಹಿಂದುವೇ ಎಂಬ ಸಂಶಯ ಮೂಡಿ 'ಬೋಲೋ ಜೈ ಶ್ರೀ ರಾಮ್' ಎಂದರು, ನಾನು ಮೌನವಾದೆ.  ಪ್ರಾಣ ರಕ್ಷಿಸಿಕೊಳ್ಳಲು ಓಡುವಂತೆ ಅವರು ಆದೇಶಿಸಿದರು. 'ನಿನಗಾಗಿ ಇನ್ನೊಂದು ಗುಂಪು ಬರುತ್ತಿದೆ' ಎಂದರು. ಭಯದಿಂದ ನಡುಗಿದ ನಾನು ಬೈಕಿನತ್ತ ಓಡಿದೆ.  ಬೈಕ್ ಕೀಗಾಗಿ ಬ್ಯಾಗನ್ನು ತಡಕಾಡಿದೆ. 'ಜಲ್ದೀ ಕರೋ, ವೋ ಲೋಗ್ ಛೋಡೇಂಗೆ ನಹೀ' ಎಂದು ಗುಂಪಿನಲ್ಲಿದ್ದ ಒಬ್ಬಾತ ಹೇಳಿದ. ಕೊನೆಗೂ  ಕೀ ದೊರಕಿ ನಾನು ಬೈಕಿನಲ್ಲಿ ಅಪರಿಚಿತ ಗಲ್ಲಿಗಳಲ್ಲಿ ಸಾಗಿ ಸುರಕ್ಷಿತ ಪುಷ್ಟಾ ರಸ್ತೆಯತ್ತ ಬಂದೆ" ಎಂದು ರಾಜಪುರೋಹಿತ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News