'ದಿಲ್ಲಿ ತಲುಪಿದ ಗುಜರಾತ್ ಮಾಡೆಲ್': ರಾಜಧಾನಿಯ ಹಿಂಸಾಚಾರದ ಬಗ್ಗೆ ದಿನಪತ್ರಿಕೆಗಳ ಮುಖಪುಟ ವರದಿ

Update: 2020-02-26 10:26 GMT

ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಕೆಲವು ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಕನಿಷ್ಠ 20 ಜನರನ್ನು ಬಲಿ ಪಡೆದಿರುವಂತೆಯೇ ಇಂದಿನ ಕೆಲ ಪ್ರಮುಖ ದಿನಪತ್ರಿಕೆಗಳ ಮುಖಪುಟ ಶೀರ್ಷಿಕೆಗಳು ಹೀಗಿದ್ದವು.

"ನೀರೋಸ್ ಡೈನ್... ಆ್ಯಸ್ ಗುಜರಾತ್ ಮಾಡೆಲ್ ರೀಚಸ್ ಡೆಲ್ಲಿ'' ಎಂಬ The Telegraph ಪತ್ರಿಕೆಯ ಶೀರ್ಷಿಕೆ ಎಲ್ಲರ ಗಮನ ಸೆಳೆದಿದೆ. ತನ್ನ ರುದ್ರಾಕ್ಷಿ ತೋರಿಸುವ ಮೂಲಕ ಪತ್ರಕರ್ತನೊಬ್ಬ ಉದ್ರಿಕ್ತ ಸಂಘಪರಿವಾರದ ಗುಂಪೊಂದರಿಂದ ತನ್ನನ್ನು ರಕ್ಷಿಸಿಕೊಂಡ ಘಟನೆಯ ವರದಿಯೂ The Telegraph  ಮುಖಪುಟದಲ್ಲಿದೆ.

The Indian Express ಪತ್ರಿಕೆ ತನ್ನ ಶೀರ್ಷಿಕೆಯನ್ನು `ಮಾಬ್, ಕರ್ಟೆಸಿ ಡೆಲ್ಲಿ ಪೊಲೀಸ್'' ಎಂದು ನೀಡುವ ಮೂಲಕ ಹಿಂಸೆ ನಿಯಂತ್ರಿಸಲು ದಿಲ್ಲಿ ಪೊಲೀಸರು ಸಾಕಷ್ಟು ಕ್ರಮ ಕೈಗೊಳ್ಳಿಲ್ಲ ಎಂಬ ಆರೋಪಗಳನ್ನು ಎತ್ತಿ ತೋರಿಸಿದೆ.

ದೈನಿಕ್ ಜಾಗರಣ್ ಮುಖಪುಟದಲ್ಲಿ ಮೊದಲ ಪ್ರಾಶಸ್ತ್ಯ ಮೋದಿ-ಟ್ರಂಪ್ ಭೇಟಿಯ ವರದಿಗೆ ನೀಡಲಾಗಿದ್ದರೆ ಅದರ ಕೆಳಗಿನ ವರದಿಯಲ್ಲಿ 'ಹಿಂಸಾಕೋರರತ್ತ ಕಂಡಲ್ಲಿ ಗುಂಡಿಕ್ಕುವ ಆದೇಶ' ಎಂಬ ಶೀರ್ಷಿಕೆಯ ವರದಿ ಜತೆಗೆ 56 ಪೊಲೀಸ್ ಸಿಬ್ಬಂದಿ ಹಿಂಸೆಯಲ್ಲಿ ಗಾಯಗೊಂಡಿದ್ದಾರೆಂದೂ ಉಲ್ಲೇಖಿಸಿದೆ.

ಶಿವಸೇನೆ ಮುಖವಾಣಿ ಸಾಮ್ನಾ ತನ್ನ ಮುಖಪುಟದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಉದ್ರಿಕ್ತ ಗುಂಪಿನ ಬಳಿ ಅಂಗಲಾಚುತ್ತಿರುವ ಫೋಟೋ ಪ್ರಕಟಿಸಿದೆ.

ಮಹಾರಾಷ್ಟ್ರದ ಸಕಾಲ್ ದೈನಿಕ ಕೂಡ `ಕಂಡಲ್ಲಿ ಗುಂಡಿಕ್ಕುವ ಆದೇಶ'ದ ಸುದ್ದಿಯನ್ನು ಪ್ರಮುಖವಾಗಿ ಕಾಣುವಂತೆ ಪ್ರಕಟಿಸಿದೆ.

ಬಂಗಾಳಿ ಪತ್ರಿಕೆ `ಆನಂದ್ ಬಜಾರ್ ಪತ್ರಿಕಾ' ತನ್ನ ವರದಿಯಲ್ಲಿ "ನನ್ನ ತಂದೆಯ ತಪ್ಪೇನು, ಪುತ್ರರ ಪ್ರಶ್ನೆ" ಎಂಬ ಶೀರ್ಷಿಕೆಯ ವರದಿ ಪ್ರಕಟಿಸಿ ಹಿಂಸೆಯಲ್ಲಿ ಮೃತಪಟ್ಟ ದಿಲ್ಲಿ ಹೆಡ್ ಕಾನ್‍ ಸ್ಟೇಬಲ್ ರತನ್ ಲಾಲ್ ಹಾಗೂ ಕರೀಂಪುರ್ ಉದ್ಯಮಿ ಮುಹಮ್ಮದ್ ಫುರ್ಖಾನ್ ಅವರ ಪುತ್ರರ ಹೇಳಿಕೆಗಳನ್ನು ಉಲ್ಲೇಖಿಸಿದೆ.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News