ಕಲಬುರಗಿ: ಅಂಬೇಡ್ಕರ್ ಪುತ್ಥಳಿಗೆ ಅವಮಾನ ಆರೋಪ; ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

Update: 2020-02-26 18:07 GMT

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿದ್ದಾರೆ ಎನ್ನಲಾದ ಘಟನೆ ಇಲ್ಲಿನ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಕೃತ್ಯ ಖಂಡಿಸಿ ಗ್ರಾಮಸ್ಥರು ಮತ್ತು ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಮಂಗಳವಾರ ಬೆಳಗ್ಗೆ ಕಿಡಿಗೇಡಿಗಳು ಅಂಬೇಡ್ಕರ್ ಪುತ್ಥಳಿಗೆ ಚಪ್ಪಲಿ ಹಾರ ಹಾಕಿದ್ದು ಕಂಡುಬಂದಿದ್ದು, ಘಟನೆಯಿಂದ ಕೆಲ ಹೊತ್ತು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಗ್ರಾಮಸ್ಥರು ಹಾಗೂ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಮರಗುತ್ತಿ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಕಿಡಿಗೇಡಿಗಳನ್ನು ಬಂಧಿಸಿ, ಗ್ರಾಮದಲ್ಲಿ ಹೊಸ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಶಾಸಕ ಮತ್ತಿಮೂಡ ಭೇಟಿ ನೀಡಿ, ಹೊಸ ಪುತ್ಥಳಿ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಕೃತ್ಯಕ್ಕೆ ಸಂಬಂಧಿಸಿದಂತೆ ಕಿಡಿಗೇಡಿ ಯಾರೇ ಆಗಿದ್ದರೂ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ತಿಳಿಸಿದರು.

ಸ್ಥಳಕ್ಕೆ ಎಸ್ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ತಹಶೀಲ್ದಾರ್ ಅಂಜುಮ ತಬಸುಮ್ ಸ್ಥಳಕ್ಕೆ ಧಾವಿಸಿ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸುವುದಾಗಿ ಪ್ರತಿಭಟನಾ ನಿರತರಿಗೆ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಪ್ರಕಾಶ ಹಾಗರಗಿ, ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ ಜಿ.ರಾಮಕೃಷ್ಣ, ನಿಂಗಪ್ಪ ಪ್ರಬುದ್ಧಕರ್‌, ಅವಿನಾಶ, ವಿದ್ಯಾಧರ, ಗೋಪಾಲ ಗೊಬ್ಬರವಾಡಿ, ನಂದನಕುಮಾರ ಹರಸೂರ, ರಾಜು, ಸುಧೀರ ಹೊನ್ನಳ್ಳಿ, ಸಂಜುಕುಮಾರ, ಅಶೋಕಕುಮಾರ ಗೌರೆ, ಶ್ರೀನಿವಾಸ ಹೋಳಕರ್, ಸುಭಾಷ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News