ಸಿಎಪಿಎಫ್ ಯುದ್ಧ ಉಡುಗೆ ಧರಿಸದಂತೆ ಕೋರಿ ಕೇಂದ್ರ ಸರಕಾರಕ್ಕೆ ಸೇನೆ ಪತ್ರ

Update: 2020-02-26 18:45 GMT
ಫೈಲ್ ಚಿತ್ರ

ಹೊಸದಿಲ್ಲಿ, ಫೆ. 26: ದೇಶದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಿಸಲು ನಿಯೋಜಿತವಾಗಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಅಥವಾ ಸಿಎಎಫ್ ಯುದ್ಧದ ಉಡುಗೆ ಧರಿಸುವುದರಿಂದ ದೂರವಿರಬೇಕು ಎಂದು ಆಗ್ರಹಿಸಿ ಸೇನೆ ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದಿದೆ.

ಯಾಕೆಂದರೆ, ಇದನ್ನು ಜನರು ತಪ್ಪಾಗಿ ವ್ಯಾಖ್ಯಾನಿಸಬಹುದು. ಅಲ್ಲದೆ, ದೇಶದ ಗೌರವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಹಾನಿ ಉಂಟಾಗಬಹುದು ಎಂದು ಸೇನೆ ಪತ್ರದಲ್ಲಿ ಹೇಳಿದೆ.

ಹಿಂಸಾಚಾರ ಭುಗಿಲೆದ್ದ ಈಶಾನ್ಯ ದಿಲ್ಲಿಯಲ್ಲಿ ನಿಯೋಜಿಸಲಾಗಿದ್ದ ಕೇಂದ್ರ ಶಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಭಾರತೀಯ ಸೇನೆಯ ಮಾದರಿಯ ಯುದ್ಧ ಉಡುಗೆ ಧರಿಸಿರುವುದು ಕಂಡು ಬಂದ ಬಳಿಕ ಸೇನೆ ರಕ್ಷಣಾ ಸಚಿವಾಲಯಕ್ಕೆ ಈ ಪತ್ರ ಬರೆದಿದೆ. ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಘಟನೆಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿವೆ. ಆಂತರಿಕ ಭದ್ರತಾ ಕರ್ತವ್ಯಗಳು ಹಾಗೂ ಚುನಾವಣೆಗೆ ಸೇನೆಯನ್ನು ನಿಯೋಜಿಸಲಾಗುತ್ತಿರುವುದರಿಂದ ಸಿಎಪಿಎಫ್ ಹಾಗೂ ರಾಜ್ಯ ಪೊಲೀಸರು ಯುದ್ಧ ಉಡುಗೆ ಧರಿಸುವುದು ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗಬಹುದು. ಇದು ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇರುವ ನಮ್ಮ ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಲ್ಲದೆ, ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಕರವಾಗಬಹುದು ಎಂದು ಸೇನಾ ಮೂಲಗಳು ತಿಳಿಸಿವೆ.

ಕಾನೂನು ಸುವ್ಯವಸ್ಥೆ ನಿರ್ವಹಿಸುವ ಹಾಗೂ ಭಯೋತ್ಪಾದನೆಯಿಂದ ತೊಂದರೆಗೊಳಗಾದ ನಗರ ಪ್ರದೇಶದಲ್ಲಿ ನಿಯೋಜನೆಯಾದ ಸಂದರ್ಭ ದೇಶಾದ್ಯಂತ ಸಿಎಪಿಎಫ್ ಯುದ್ಧ ಉಡುಗೆಯನ್ನು ಧರಿಸದಂತೆ ಮಾರ್ಗಸೂಚಿಗಳನ್ನು ನೀಡುವಂತೆ ರಕ್ಷಣಾ ಸಚಿವಾಲಯ ಹಾಗೂ ಗೃಹ ಸಚಿವಾಲಯಕ್ಕೆ ಪತ್ರದ ಮೂಲಕ ಸೇನೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News