ಹುಬ್ಬಳ್ಳಿ: ಕಾಶ್ಮೀರಿ ವಿದ್ಯಾರ್ಥಿಗಳ ಪರ ವಾದಿಸದಂತೆ ಮಾಡಿದ್ದ ನಿರ್ಣಯ ವಾಪಸ್ ಪಡೆದ ವಕೀಲರ ಸಂಘ

Update: 2020-02-27 15:51 GMT

ಬೆಂಗಳೂರು, ಫೆ.27: ಪಾಕಿಸ್ತಾನದ ಝಿಂದಾಬಾದ್ ಘೋಷಣೆ ಕೂಗಿದ ಕಾಶ್ಮೀರ ವಿದ್ಯಾರ್ಥಿಗಳ ಪರ ವಕಾಲತ್ತು ಹಾಕದಂತೆ ತೆಗೆದುಕೊಂಡಿದ್ದ ನಿರ್ಣಯವನ್ನು ಹುಬ್ಬಳ್ಳಿ ವಕೀಲರ ಸಂಘ ಮಾರ್ಪಡಿಸಿದೆ ಹಾಗೂ ವಕೀಲರಿಗೆ ಸಹಕರಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತು ವಕೀಲ ಬಿ.ಟಿ.ವೆಂಕಟೇಶ್ ಸೇರಿ 24 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ವಿದ್ಯಾರ್ಥಿಗಳ ವಿರುದ್ಧವಾಗಿ ಕೈಕೊಂಡಿರುವ ನಿರ್ಣಯವನ್ನು ಹುಬ್ಬಳ್ಳಿ ವಕೀಲರ ಸಂಘವು ಮಾರ್ಪಡಿಸಿದೆ ಹಾಗೂ ವಕೀಲರಿಗೆ ಸಹಕರಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಹುಬ್ಬಳ್ಳಿ ವಕೀಲರ ಸಂಘದ ಪ್ರತಿನಿಧಿಗಳು ನ್ಯಾಯಪೀಠದ ಮುಂದೆ ಖುದ್ದು ಹಾಜರಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ವಿದ್ಯಾರ್ಥಿಗಳ ಪರ ವಾದಿಸುವ ವಕೀಲರಿಗೆ ಅಡ್ಡಿಪಡಿಸುವ ವಕೀಲರ ಹೆಸರು ಹಾಗೂ ವಿಳಾಸವನ್ನು ನೀಡಬೇಕು. ಅಂಥವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗುತ್ತದೆ. ವಕೀಲರು ಆರೋಪಿಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಆದರೆ, ವಕೀಲರೆ ಸಂವಿಧಾನದ ವಿರುದ್ಧ ವರ್ತಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಆರೋಪಿಗಳ ಪರ ವಾದಿಸುವ ವಕೀಲರಿಗೆ ಈ ಹಿಂದೆ ಅಡ್ಡಿಪಡಿಸದಂತೆ ಪುನಃ ಅಡ್ಡಿಪಡಿಸಬಾರದು. ಆರೋಪಿಗಳು ಸಲ್ಲಿಸುವ ಜಾಮೀನು ಅರ್ಜಿಯನ್ನು ತ್ವರಿತಗತಿಯಲ್ಲಿ ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ಸೂಚಿಸಿ, ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿತು. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಅವರು ವಾದಿಸಿದರು.

ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡಿರುವ ನಿರ್ಣಯ ಸಂವಿಧಾನದ 21 ಮತ್ತು 22ರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿವೆ. ವಕೀಲರ ಸಂಘದ ನಿರ್ಣಯ ರದ್ದುಪಡಿಸಬೇಕು ಮತ್ತು ಆರೋಪಿಗಳನ್ನು ಪ್ರತಿನಿಧಿಸುವ ವಕೀಲರಿಗೆ ಸೂಕ್ತ ರಕ್ಷಣೆ ನೀಡುವಂತೆ ನಿರ್ದೇಶನ ನೀಡಬೇಕು. ಕೋರ್ಟ್ ಬಳಿ ಗಲಾಟೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿದಾರರ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ವಕೀಲರ ಸಂಘದ ಸುಮಾರು 1,600 ಸದಸ್ಯರು ಸೋಮವಾರ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಮೂವರು ಕಾಶ್ಮಿರಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸದಿರಲು ನಿರ್ಣಯ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News