ಚಿಕ್ಕಮಗಳೂರು: ಶಾಸಕ ಯತ್ನಾಳ್ ಬಂಧನಕ್ಕೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳಿಂದ ಧರಣಿ

Update: 2020-02-27 12:09 GMT

ಚಿಕ್ಕಮಗಳೂರು, ಫೆ.27: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಪದ ಬಳಸಿಸಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ರಾಜ್ಯ ಸಂಚಾಲಕ ಗೌಸ್‍ ಮೊಹಿದ್ದೀನ್ ಒತ್ತಾಯಿಸಿದ್ದಾರೆ.

ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಡೆದ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರು, ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಅವಹೇಳನ ಮಾಡಿರುವುದು ಖಂಡನಾರ್ಹ. ದೊರೆಸ್ವಾಮಿ ಅವರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದ ಫಲವಾಗಿ ನಾವೆಲ್ಲವರೂ ಇಂದು ದೇಶದಲ್ಲಿ ಬದುಕುವಂತಾಗಿದೆ. ಅವರು ಸ್ವಾತಂತ್ರ್ಯ ಹೋರಾಟವಲ್ಲದೇ ಇಳಿ ವಯಸಿಸ್ಸಿನಲ್ಲೂ ಭ್ರಷ್ಟಚಾರ, ಸಾಮಾಜಿಕ ಅಸಮಾನತೆ, ಸಾಮಾಜ್ಯಶಾಹಿ ವ್ಯವಸ್ಥೆ, ಕಾರ್ಪೋರೆಟ್ ಲೂಟಿ, ಜಾತಿವಾದ, ಕೋಮುವಾದದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದು, ಅವರು ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದಾರೆ. ಇಂತಹ ಹಿರಿಯ ಹೋರಾಟಗಾರರಿಗೆ ಅಪಮಾನ ಮಾಡಿರುವ ಶಾಸಕ ಬಸವನಗೌಡ ಯತ್ನಾಳ್ ಶಾಸಕ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ಅರ್ಹತೆ ಹೊಂದಿಲ್ಲ. ಯತ್ನಾಳ್ ವಿರುದ್ಧ ರಾಜ್ಯ ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು, ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ಅವರು ಆಗ್ರಹಿಸಿದರು.

ವಸತಿ ಹಕ್ಕು ಹೋರಾಟ ಸಮಿತಿ ಸದಸ್ಯ, ಹೋರಾಟಗಾರ ನೀಲಗುಳಿ ಪದ್ಮನಾಭ ಮಾತನಾಡಿ, ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ 23 ತೀವ್ರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಿದ್ದು, ಎಲ್ಲವೂ ನಾಡನ್ನು ಲೂಟಿ ಮಾಡಿರುವ ಪ್ರಕರಣಗಳಾಗಿವೆ. ಇಂತಹ ಭ್ರಷ್ಟಾಚಾರಿಗಳು ದೊರೆಸ್ವಾಮಿ ಅವರಂತಹ ಮೇರು ವ್ಯಕ್ತಿತ್ವದ ಮುತ್ಸದ್ಧಿಯನ್ನು ಹಿಯಾಳಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಲೂಟಿಕೋರ ಯತ್ನಾಳ್‍ಗೆ ದೊರೆಸ್ವಾಮಿ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ಬಸವನಗೌಡ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ದೇಶದ್ರೋಹ ಪ್ರಕರಣ ದಾಖಲಿಸಿ ಅವರ ಮೇಲಿರುವ ಕ್ರಿಮಿನಲ್ ಪ್ರಕರಣದ ಆಧಾರದ ಮೇಲೆ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ದಲಿತ ಸಂಘರ್ಷ ಸಮಿತಿಯ ರಾಜರತ್ನಂ, ದಂಟರಮಕ್ಕಿ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ ಸಾಗರ ಬಣದ ಬಾಲಕೃಷ್ಣ, ಅಂಬೇಡ್ಕರ್ ಯುವ ಸಂಘದ ವೆಂಕಟೇಶ್, ನೀಲಗುಳಿ ಪದ್ಮನಾಭ, ಯುಸೂಫ್ ಹಾಜಿ, ಹೊನ್ನಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News