ನಕಲಿ ಪಡಿತರ ಚೀಟಿ ಹಿಂದಿರುಗಿಸದಿದ್ದರೆ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ: ಆಹಾರ ಸಚಿವರ ಎಚ್ಚರಿಕೆ

Update: 2020-02-27 13:38 GMT

ಬೆಂಗಳೂರು, ಫೆ. 27: ನಕಲಿ ಪಡಿತರ ಚೀಟಿ ಹೊಂದಿರುವವರು ಇನ್ನು ಒಂದು ತಿಂಗಳ ಒಳಗೆ ಹಿಂದಿರುಗಿಸಬೇಕು. ಇಲ್ಲವಾದರೆ ಆಹಾರ ಇಲಾಖೆ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಎಚ್ಚರಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಪಡಿತರ ಚೀಟಿದಾರರು ಸರಕಾರದಿಂದ ಈವರೆಗೂ ಪಡೆದ ಪಡಿತರದ ಒಟ್ಟು ಮಾರುಕಟ್ಟೆ ಮೌಲ್ಯವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದರು.

‘ಅನ್ನಭಾಗ್ಯ’ ಬಜೆಟ್‌ನಲ್ಲಿ ನೋಡಿ: ಅನ್ನಭಾಗ್ಯ ಯೋಜನೆಯ ಮುಂದಿನ ಸ್ಥಿತಿ ಬಗ್ಗೆ ಮಾ.5ರಂದು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಲಿರುವ ಬಜೆಟ್‌ನಲ್ಲಿ ಗೊತ್ತಾಗಲಿದೆ ಎಂದ ಗೋಪಾಲಯ್ಯ, ಅನ್ನಭಾಗ್ಯ ಯೋಜನೆ ಬದಲಾವಣೆ ಬಗ್ಗೆ ಪರೋಕ್ಷ ಸುಳಿವು ನೀಡಿದರು.

ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮಾರಾಟಕ್ಕೆ ಚಿಂತನೆ ನಡೆಸಿದ್ದು, ಕೇಂದ್ರ ಸಚಿವ ಸದಾನಂದಗೌಡ ಅವರೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕ್ರಿಮಿನಾಶಕ ಬಳಸಿಲ್ಲ: ಆಹಾರ ಇಲಾಖೆ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಸಂರಕ್ಷಣೆಗೆ ಯಾವುದೇ ಕ್ರಿಮಿನಾಶಕ ಬಳಕೆ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಇಲಾಖೆಯಲ್ಲಿ ಆರು ತಿಂಗಳು ಮೇಲ್ಪಟ್ಟು ಸಂಗ್ರಹವಾದ ಪಡಿತರ ಧಾನ್ಯಗಳನ್ನು ಪರೀಕ್ಷೆಗೆ ರವಾನಿಸಲಾಗುವುದು ಎಂದರು.

ಇಲಾಖೆ ದಾಸ್ತಾನು ಮಾಡಿರುವ ಗೋಣಿ ಚೀಲಗಳ ಮೇಲೆ ಹುಳು ಬೀಳದಂತೆ ಔಷಧ ಸಿಂಪಡಿಸಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇಲಾಖೆ ಪಡಿತರ ಯಾವುದೇ ರೀತಿಯಲ್ಲಿಯೂ ಹಾನಿಕಾರಕವಲ್ಲ. ಇದರಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News