ಹುಂಡಿ ಆದಾಯ ಸೋರಿಕೆ ತಡೆಗೆ ಕ್ರಮ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-02-27 12:37 GMT

ಬೆಂಗಳೂರು, ಫೆ. 27: ಮುಜರಾಯಿ ದೇವಸ್ಥಾನಗಳ ಹುಂಡಿ ಆದಾಯ ಸೋರಿಕೆ, ದೇವಸ್ಥಾನ ಮತ್ತು ಛತ್ರಗಳ ಆಸ್ತಿ ಸಂರಕ್ಷಣೆ ಹಾಗೂ ಇಲಾಖೆ ವ್ಯಾಪ್ತಿಯಿಂದ ಕೈಬಿಟ್ಟು ಆದಾಯ ಹೆಚ್ಚಿರುವ ದೇವಸ್ಥಾನಗಳ ಮರು ಸೇರ್ಪಡೆ ಸಂಬಂಧ ವರದಿ ನೀಡಲು ಹಿರಿಯ ಐಎಎಸ್ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಲಾಖೆ ವ್ಯಾಪ್ತಿಯಲ್ಲಿನ 33 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಿದ್ದು, ಅವುಗಳ ಭೂ ದಾಖಲೆಗಳ ಗಣಕೀಕರಣ ನಡೆಯುತ್ತಿದೆ. ಆಸ್ತಿ ಒತ್ತುವರಿಯಾದ ಪ್ರಕರಣಗಳು ಇದುವರೆಗೆ ಪತ್ತೆಯಾಗಿಲ್ಲ. ಆದರೆ, ಇಲಾಖೆ ಆಸ್ತಿ ಸಂರಕ್ಷಣೆ ದೃಷ್ಟಿಯಿಂದ ಮೂರು ತಿಂಗಳಲ್ಲಿ ಈ ಬಗ್ಗೆ ಸಮಗ್ರ ವರದಿ ನೀಡಲು ಸೂಚನೆ ನೀಡಲಾಗಿದೆ. ಇಲಾಖೆ ಆದಾಯ ಹೆಚ್ಚಿಸುವ ದೃಷ್ಟಿಯಿಂದ ಸೋರಿಕೆ ತಡೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.

ದೇವಾಲಯಗಳಲ್ಲಿ ಗೋಶಾಲೆ: ಗೋ ತಳಿ ಸಂರಕ್ಷಣೆಗಾಗಿ ರಾಮಚಂದ್ರಾಪುರ ಮಠದ ಮಾರ್ಗದರ್ಶನದಲ್ಲಿ ರಾಜ್ಯದ 25 ದೇವಳಗಳಲ್ಲಿ ಗೋಶಾಲೆ ನಿರ್ಮಾಣಕ್ಕೆ ಸರಕಾರ ಚಿಂತನೆ ನಡೆಸಿದೆ. ಉತ್ತಮ ಆದಾಯವಿರುವ ‘ಎ’ ದರ್ಜೆಯ ಇಪ್ಪತ್ತೈದು ದೇವಳಗಳ ಆವರಣದಲ್ಲಿ ಗೋಶಾಲೆ ಸ್ಥಾಪಿಸಲಾಗುವುದು ಎಂದರು.

ಸಪ್ತಪದಿ: ಸರಳ ಸಾಮೂಹಿಕ ವಿವಾಹ ಪ್ರೋತ್ಸಾಹಿಸಲು ಇಲಾಖೆಯ ನೂರು ದೇವಸ್ಥಾನಗಳಲ್ಲಿ ‘ಸಪ್ತಪದಿ’ ಯೋಜನೆಯಡಿ ಮೊದಲ ಹಂತದಲ್ಲಿ ಎಪ್ರಿಲ್ 26ಕ್ಕೆ ನಡೆಯಲಿರುವ ಸಾಮೂಹಿಕ ವಿವಾಹಕ್ಕೆ ಅರ್ಜಿ ಸಲ್ಲಿಸಲು ಮಾರ್ಚ್ 27 ಕೊನೆಯ ದಿನವಾಗಿದೆ. ಗದಗ, ಹುಬ್ಬಳ್ಳಿ-ಧಾರವಾಡ, ಹಾವೇರಿ ಜಿಲ್ಲೆಯಲ್ಲಿ ‘ಎ’ ದರ್ಜೆ ದೇವಸ್ಥಾನಗಳಲ್ಲ. ಹೀಗಾಗಿ ಬಿ ಮತ್ತು ಸಿ ದರ್ಜೆ ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಲು ಉದ್ದೇಶಿಸಿದ್ದು, ಇಲಾಖೆ ಆ ದೇವಸ್ಥಾನಗಳಿಗೆ ಅನುದಾನ ನೀಡಲಿದೆ ಎಂದು ತಿಳಿಸಿದರು.

ಎ.26ರ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಈವರೆಗೂ 1,218 ಅರ್ಜಿಗಳನ್ನು ವಿತರಣೆ ಮಾಡಿದ್ದು, ಆ ಪೈಕಿ ದಾಖಲೆಗಳೊಂದಿಗೆ 200 ಅರ್ಜಿಗಳು ವಾಪಸ್ ಬಂದಿವೆ ಎಂದ ಅವರು, ಆರ್ಥಿಕವಾಗಿ ಹಿಂದುಳಿದವರು ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋರಿದರು.

ಜಾಗೃತಿ: ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲು ಮಾ.1ಕ್ಕೆ ಉತ್ತರ ಕನ್ನಡದ ಶಿರಸಿಯಲ್ಲಿ, ಮಾ.7ಕ್ಕೆ ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಜನಪ್ರತಿನಿಧಿಗಳ ಜಾಗೃತಿಗೆ ಸಪ್ತಪದಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪರಿಶೀಲನೆ: ದೇವಳಗಳಲ್ಲಿ ವಸ್ತ್ರ ಸಂಹಿತೆ, ಪೂಜಾ ಪದ್ಧತಿ ಬದಲಾವಣೆ ಸೇರಿ ಹಲವು ಸಲಹೆಗಳು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಆತ್ಮರಕ್ಷಣೆಗಾಗಿ ಮಾರ್ಷಲ್ ಆರ್ಟ್ಸ್ ಬಗ್ಗೆ ತರಬೇತಿ ನೀಡಲು ಸಲಹೆ ಬಂದಿದ್ದು, ಪರಿಶೀಲಿಸಲಾಗುವುದು ಎಂದರು.

‘ತಿರುಪತಿ ತಿರುಮಲ, ಕೇರಳದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ರಾಜ್ಯದಿಂದ ಹೋಗುವ ಭಕ್ತರಿಗೆ ಆಗುವ ತೊಂದರೆ ಬಗ್ಗೆ ಪರಿಶೀಲನೆಗೆ ಶೀಘ್ರವೇ ತಾನು ತಿರುಪತಿಗೆ ಭೇಟಿ ನೀಡಲಿದ್ದೇನೆ. ಅಲ್ಲದೆ, ಈಗಾಗಲೇ ಮೂಲಸೌಲಭ್ಯ ಕಲ್ಪಿಸುವ ಸಂಬಂಧ ಇಬ್ಬರು ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ’

-ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News