ಭದ್ರಾವತಿ: 3ನೇ ದಿನಕ್ಕೆ ಕಾಲಿಟ್ಟ ಸಿಎಎ ವಿರೋಧಿ ಪ್ರತಿಭಟನೆ

Update: 2020-02-27 14:40 GMT

ಭದ್ರಾವತಿ, ಫೆ.27: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ತಾಲೂಕು ಅಂಜುಮನ್ ಇಸ್ಲಾಮುಲ್ ಮುಸ್ಲಿಮೀನ್ ಕಮಿಟಿ ನಗರದ ಹೊಸ ಸೇತುವೆ ರಸ್ತೆ ಬನಶಂಕರಿ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿರುವ ಧರಣಿ 3ನೇ ದಿನವೂ ಮುಂದುವರಿದಿದೆ.

ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರುವ ಪ್ರತಿಭಟನಾಕಾರರು, ಸರ್ಕಾರ ಜಾರಿಗೆ ತರಲು ಹೊರಟಿರುವ ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಹೋರಾಟವನ್ನು ತೀವ್ರಗೊಳಿಸುತ್ತಿದ್ದು, ರಾಜ್ಯದ ವಿವಿಧೆಡೆಗಳಿಂದ ಅಲ್ಪಸಂಖ್ಯಾತ ಮುಖಂಡರು ಆಗಮಿಸಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.

ಇಂದು ಧರಣಿ ವೇದಿಕೆಗೆ ಆಗಮಿಸಿದ ರಾಜ್ಯ ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ಸಯೀದ್ ಅಹಮದ್ ಮಾತನಾಡಿ, ಪೌರತ್ವಕ್ಕೆ ಸಂಬಂಧಿಸಿದ ನೋಂದಣಿ ಪ್ರಕ್ರಿಯೆಗಳು ಎಪ್ರಿಲ್ ತಿಂಗಳಿನಿಂದ ಆರಂಭವಾಗುತ್ತದೆ. ನೋಂದಣಿಗಾಗಿ ಭರ್ತಿ ಮಾಡುವ ಅರ್ಜಿಗಳಲ್ಲಿ ಏನಿದೆ, ಯಾವ ಅಂಶಗಳನ್ನು ಭರ್ತಿ ಮಾಡಬೇಕು ಎಂಬ ನಿಖರವಾದ ಮಾಹಿತಿ ಇದುವರೆಗೂ ಯಾರಿಗೂ ತಿಳಿದು ಬಂದಿಲ್ಲ. ವಿಚಾರ ಸುಪ್ರೀಂಕೋರ್ಟ್ ನಲ್ಲಿದ್ದು ತೀರ್ಪು ಇನ್ನೂ ಹೊರಬಂದಿಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.

ಪೌರತ್ವ ನೋಂದಣಿ ಪ್ರಕ್ರಿಯೆಯ ಸಾಧಕ ಬಾಧಕಗಳನ್ನು ಗಮನಿಸಲು ವಕೀಲರನ್ನು ನೇಮಕ ಮಾಡಲಾಗಿದ್ದು, ಅವರ ಮಾಹಿತಿಯ ಮೇರೆಗೆ ಪೌರತ್ವ ನೋಂದಣಿ ನಡೆಯುತ್ತದೆ. ಎಲ್ಲಾ ಭಾಗಗಳಲ್ಲಿಯೂ ನೇಮಕಗೊಂಡಿರುವ ವಕೀಲರು ನಿಮಗೆ ನೆರವಾಗಲಿದ್ದಾರೆ. ಪೌರತ್ವಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳು ಕಾನೂನಾತ್ಮವಾಗಿ ಸರಿಯಾಗಿದ್ದಲ್ಲಿ ಮಾತ್ರ ಭರ್ತಿ ಮಾಡಲು ಮುಂದಾಗಬೇಕಿದೆ. ಆದರೂ ಭರ್ತಿ ಮಾಡುವಾಗ ಎಚ್ಚರಿಕೆಯಿಂದಿರಿ. ಈಗಲೇ ನೀವ್ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಸೋಶಿಯಲ್ ಪಾರ್ಟಿ ಮುಖಂಡ ಮುನೀರ್ ಅಹಮದ್, ವಕೀಲ ಶಾಹೇದ್, ಅಲ್ಪಸಂಖ್ಯಾತ ಮುಖಂಡ ಅದ್ದು, ಸ್ಥಳೀಯ ಮುಖಂಡರುಗಳಾದ ಸಿ.ಎಂ, ಖಾದಿರ್, ಮಹಮದ್ ಸನಾಹುಲ್ಲಾ, ಅಮೀರ್ ಜಾನ್, ಬಾಬಾಜಾನ್, ಹುಸೇನ್‌ಸಾಬ್, ರಹಮತ್ ಹುಲ್ಲಾಬೇಗ್, ಎಂ.ಡಿ. ಗೌಸ್ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News