ವಿಜಯಪುರ: ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಎಸ್‍ಯುಸಿಐ ಪ್ರತಿಭಟನೆ

Update: 2020-02-27 16:48 GMT

ವಿಜಯಪುರ, ಫೆ.27: ಬಸ್ ಪ್ರಯಾಣ ದರ ಏರಿಕೆ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಎಸ್‍ಯುಸಿಐ ಜಿಲ್ಲಾ ಘಟಕದ ವತಿಯಿಂದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಭಿ.ಭಗವಾನರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಕೆಎಸ್‍ಆರ್‍ಟಿಸಿ ಹಾಗೂ ತನ್ನ ಎಲ್ಲ ಅಂಗ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿರುವುದು ನೋವಿನ ಸಂಗತಿ. ಮೊದಲೇ ಬೆಲೆ ಏರಿಕೆಯ ತೊಂದರೆ ಎದುರಿಸುತ್ತಿರುವ ಜನತೆಗೆ ಬಸ್ ಪ್ರಯಾಣ ದರ ಏರಿಕೆಯಾಗಿರುವುದು ಗಾಯದ ಮೇಲೆ ಬರ ಎಳೆದಂತಾಗಿದೆ ಎಂದು ದೂರಿದರು. ಬಸ್ ದರ ಹೆಚ್ಚಳ ನಿರ್ಧಾರ ಜನತೆಗೆ ಹೊರೆಯಾಗಿರುವುದರಿಂದ ಈ ಕೂಡಲೇ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು. 

ರಾಜ್ಯದ ಜನತೆ ಕಂಡರಿಯದ ಭೀಕರ ನೆರೆ ಹಾವಳಿಯಿಂದ ತತ್ತರಿಸಿದ್ದು, ಇನ್ನೂ ಚೇತರಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಜೊತೆಗೆ ನೋಟ್ ಬ್ಯಾನ್, ಜಿಎಸ್‍ಟಿ ಹೇರಿಕೆಯಿಂದಾಗಿ ದೇಶದಾದ್ಯಂತ ತೀವ್ರ ಆರ್ಥಿಕ ಹಿನ್ನಡೆಯುಂಟಾಗಿ ಜನತೆ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಕಷ್ಟದ ಸಂದರ್ಭದಲ್ಲಿ ಸರಕಾರ ಜನತೆಯ ಜೀವನ ಮಟ್ಟವನ್ನು ಮೇಲೆತ್ತಲು ಅನೂಕೂಲವಾಗುವ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಬದಲಾಗಿ ಬಸ್ ಪ್ರಯಾಣದರವನ್ನು ಶೇ.12ರಷ್ಟು ಹೆಚ್ಚಳ ಮಾಡಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಮಿತಿ ಸದಸ್ಯ ಎಚ್.ಟಿ. ಭರತ್ ಕುಮಾರ್ ಮಾತನಾಡಿ, ಹಿಂದಿನ ಸರಕಾರಗಳ ಜನಪರ ಯೋಜನೆಗಳನ್ನು ಜಾರಿ ಮಾಡಲು ಮೀನಾಮೇಷ ಎಣಿಸುವ ಈ ಸರಕಾರ ಜನ ವಿರೋಧಿ ಪ್ರಸ್ತಾವವನ್ನು ತ್ವರಿತಗತಿಯಲ್ಲಿ ಜಾರಿಗೊಳಿಸುತ್ತಿರುವುದು ಖಂಡನೀಯ ಎಂದರು. 

ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಂ ಮಾಶ್ಯಾಳಕರ, ವಿವಿಧ ಸಂಘಟನೆಗಳ ಪ್ರಮುಖರಾದ ಸದಾನಂದ ಮೋದಿ, ಎಚ್.ಟಿ. ಮಲ್ಲಿಕಾರ್ಜುನ, ಬಾಳು ಜೇವೂರ, ಸಿದ್ದಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಸುನಿಲ ಸಿದ್ರಾಮಶೆಟ್ಟಿ, ದೀಪಾ ವಡ್ಡರ, ಕಾವೇರಿ ಹಾಗೂ ತಿಪರಾಯ ಹತ್ತರಕಿ, ಪ್ರಕಾಶ್‍ ಕಿಲಾರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News