ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ. ವಂಚನೆ: ಇರಾನ್ ಮೂಲದ ಇಬ್ಬರ ಬಂಧನ

Update: 2020-02-27 17:09 GMT

ಮೈಸೂರು,ಫೆ.27: ಗಮನ ಬೇರೆಡೆಗೆ ಸೆಳೆದು 1.26 ಲಕ್ಷ ರೂ. ಹಣವನ್ನು ಇಬ್ಬರು ವ್ಯಕ್ತಿಗಳು ವಂಚಿಸಿದ ಘಟನೆ ವಿಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಇದೀಗ ಬೆಂಗಳೂರಿನಲ್ಲಿ ಇರಾನ್ ಮೂಲದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಇರಾನ್ ನ ಟೆಹ್ರಾನ್ ಹೋಶಾಂಗ್ ಎಂಬವರ ಪುತ್ರ ಸಯೀದ್ ರೋಸ್ತಾಮಿ (26) ಹಾಗೂ ಎಗ್ಬಾಲ್ಸ್ ಡೇ ಪುತ್ರ ಸೇಬರ್ ಹೊಸೈನ್ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯಲ್ಲಿ ಇನ್ಸ್ ಪೆಕ್ಟರ್ ಬಾಲಕೃಷ್ಣ, ಎಎಸ್ ಐ ಆ್ಯಂಟನಿ, ಸಿಬ್ಬಂದಿಗಳಾದ ಸೀನ, ಸೋಮ ಆರಾಧ್ಯ ಪಾಲ್ಗೊಂಡಿದ್ದರು.

ಫೆ.8ರಂದು ಇವರಿಬ್ಬರು ಹುಣಸೂರು ರಸ್ತೆಯಲ್ಲಿರುವ ಹಿನಕಲ್ ನ ಮಾಂಡೋವಿ ಮೋಟಾರ್ಸ್ ನ ಟ್ರೂ ವ್ಯಾಲ್ಯೂ ವಿಭಾಗದ ಸಹಾಯಕ ಲೆಕ್ಕಾಧಿಕಾರಿ ಕಾರ್ತೀಕ ಎಂಬವರ ಗಮನ ಬೇರೆಡೆ ಸೆಳೆದು ವಂಚಿಸಿದ್ದರು. ವಂಚಕರಿಬ್ಬರು ಇವರ ಬಳಿ ಬಂದು 2018ನೇ ಇಸವಿಯ 2 ಸಾವಿರ ಮುಖಬೇಲೆಯ ನೋಟು ಬೇಕಾಗಿದೆ ಎಂದು ಕೇಳಿದ್ದು, ನೋಟು ಮುದ್ರಣವಾದ ಇಸವಿಯನ್ನು ನೋಡುತ್ತಿದ್ದಾಗ ಅವರ ಗಮನವನ್ನು ಬೇರೆಡೆಗೆ ಸೆಳೆದು ಇವರು 2 ಸಾವಿರ ರೂ.ಮುಖಬೆಲೆಯ ಒಟ್ಟು 63 ನೋಟುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇವರು ಹೋದ ನಂತರ ಮತ್ತೆ ಎಣಿಸಿದಾಗ ನೋಟು ಕಡಿಮೆ ಇರುವುದು ಕಂಡು ಬಂದಿತ್ತು. ಮೇಲ್ನೋಟಕ್ಕೆ ಇರಾನಿ ಪ್ರಜೆಗಳಂತೆ ಕಾಣುತ್ತಿದ್ದರು ಎಂದು ದೂರು ನೀಡುವಾಗ ತಿಳಿಸಿದ್ದರು.

ಅವರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಇಬ್ಬರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News