ಸಾವಿರ ಸರಕಾರಿ ಶಾಲೆಗಳಿಗೆ ಇನ್ಫೋಸಿಸ್ ನಿಂದ ಕಂಪ್ಯೂಟರ್ ಪೂರೈಕೆ: ಶಿಕ್ಷಣ ಸಚಿವರ ಅಭಿನಂದನೆ

Update: 2020-02-27 17:56 GMT

ಬೆಂಗಳೂರು, ಫೆ.27: ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ, ಒಂದು ಸಾವಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಪೂರೈಕೆ ಮಾಡಲು ಉದ್ದೇಶಿಸಿದ್ದು, ಇನ್ಫೋಸಿಸ್ ಪ್ರತಿಷ್ಠಾನದ ಈ ಸೇವಾ ಕಾರ್ಯಕ್ಕೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಗುರುವಾರ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ ಜೊತೆ ನಡೆದ ಸಭೆಯ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಸಭೆಯಲ್ಲಿನ ಚರ್ಚೆಗೆ ಪೂರಕವಾಗಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ನಿರೀಕ್ಷಿತ ಗುಣಮಟ್ಟದ ತಂತ್ರಜ್ಞಾನ ಒದಗಿಸುವ ಕಂಪ್ಯೂಟರ್‌ಗಳು ಮತ್ತು ಪೂರಕ ಪರಿಕರಗಳನ್ನು ಪೂರೈಸುವ ಕುರಿತು ದಾಖಲಾತಿ ಹೆಚ್ಚಾಗಿರುವ ಒಂದು ಸಾವಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಗುರುತಿಸಬೇಕು. ಪ್ರಮುಖವಾಗಿ ಈ ಶಾಲೆಗಳಲ್ಲಿ ಪ್ರಸ್ತುತ ಇರುವ ಶೈಕ್ಷಣಿಕ ಸ್ಥಿತಿಗತಿ ಮತ್ತು ಇನ್ಫೋಸಿಸ್ ಸಂಸ್ಥೆ ಕಂಪ್ಯೂಟರ್‌ಗಳನ್ನು ಪೂರೈಸಿದ ನಂತರದ ಮೂರು ತಿಂಗಳ ಅವಧಿಯ ಶೈಕ್ಷಣಿಕ ಸ್ಥಿತಿಗತಿಯ ಗುಣಮಟ್ಟ ಅಳೆಯುವಂತಹ ವ್ಯವಸ್ಥೆಯನ್ನು ಕಡ್ಡಾಯವಾಗಿ ಪೂರ್ವದಲ್ಲೆ ರೂಪಿಸಬೇಕು ಎಂದು ಅವರು ಹೇಳಿದ್ದಾರೆ.

ಮೊದಲ ಹಂತದಲ್ಲಿ ಒಂದು ಸಾವಿರ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಪೂರೈಸುವುದಾಗಿ ಸುಧಾಮೂರ್ತಿ ಭರವಸೆ ನೀಡಿದ್ದು, ಈ ಕುರಿತು ಇನ್ಫೋಸಿಸ್ ಪ್ರತಿಷ್ಠಾನದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಒಂದು ವಾರದೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಪ್ರತಿ ಸರಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ಇನ್ಫೋಸಿಸ್ ಪ್ರತಿಷ್ಠಾನದಿಂದ ಮೊದಲ ಹಂತವಾಗಿ ಒಂದು ಕೋಟಿ ರೂ.ನೀಡುವುದಾಗಿ ಸುಧಾಮೂರ್ತಿ ಘೋಷಿಸಿದ ಹಿನ್ನೆಲೆಯಲ್ಲಿ, ಈ ಕುರಿತು ಮುಂದಿನ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರ ಸಮರ್ಥ ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಬೋಧನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸಲು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರು ಆಸಕ್ತಿ ಹೊಂದಿದ್ದು, ಈ ಕೂಡಲೇ ಅಂತಹ ಶಿಕ್ಷಕರನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಿ ನನಗೆ ಸಲ್ಲಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಪ್ರತಿಷ್ಠಾನದ ಆಶ್ರಯದಲ್ಲಿ ಶಾಲೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗ್ರಂಥಾಲಯ ಸೌಲಭ್ಯ ಹೊಂದಿರದ 10 ಕೆಪಿಎಸ್ ಶಾಲೆಗಳನ್ನು ಗುರುತಿಸಿ ಪಟ್ಟಿಯನ್ನು ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.ಸೌಲಭ್ಯ ಪಡೆಯುವ ಶಾಲೆಗಳು ಇನ್ಫೋಸಿಸ್ ಪ್ರತಿಷ್ಠಾನ ಬಯಸುವ ರೀತಿಯಲ್ಲಿ ಸ್ಮರಣಾ ಫಲಕಗಳನ್ನು ಶಾಲೆಗಳಲ್ಲಿ ಅಳವಡಿಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News