ದಿಲ್ಲಿ ಹಿಂಸಾಚಾರ: ಮೃತರ ಸಂಖ್ಯೆ 38ಕ್ಕೆ ಏರಿಕೆ

Update: 2020-02-28 03:54 GMT

ಹೊಸದಿಲ್ಲಿ, ಫೆ.28: ದಿಲ್ಲಿ ಹಿಂಸಾಚಾರದ ವೇಳೆ ಗಂಭೀರ ಗಾಯಗೊಂಡಿದ್ದ ಮತ್ತಷ್ಟು ಮಂದಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದು, ಚರಂಡಿಗಳಿಂದ ಕೆಲ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಿಂದ ಮೃತಪಟ್ಟವರ ಒಟ್ಟು ಸಂಖ್ಯೆ 38ಕ್ಕೆ ಏರಿದಂತಾಗಿದೆ. ಬುಧವಾರ ರಾತ್ರಿ ಕೂಡಾ ಯಾವುದೇ ಹಿಂಸಾಕೃತ್ಯಗಳು ವರದಿಯಾಗಿಲ್ಲ. ರಾಜಧಾನಿ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಪರಿಸ್ಥಿತಿ ಸುಧಾರಣೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಿರುವ ಪ್ರದೇಶಗಳಲ್ಲಿ ಶುಕ್ರವಾರ 10 ಗಂಟೆ ಕಾಲ ನಿಷೇಧಾಜ್ಞೆ ಸಡಿಲಿಸಲಾಗಿದೆ.

ದಿಲ್ಲಿ ಪೊಲೀಸರು ಗಲಭೆ ಸಂಬಂಧ ಮತ್ತೆ 130 ಮಂದಿಯನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 400 ಆಗಿದೆ. 48 ಎಫ್‌ಐಆರ್ ದಾಖಲಿಸಲಾಗಿದೆ. ಗುಪ್ತಚರ ದಳ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ ಕೌನ್ಸಿಲರ್ ತಾಹಿರ್ ಹುಸೈನ್ ಮತ್ತು ಅವರ ಸಹಚರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಲ್ಲ ಪ್ರಕರಣಗಳನ್ನು ಅಪರಾಧ ವಿಭಾಗ ಹಾಗೂ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿದೆ.

ಹಿಂಸಾಚಾರದ ಹಿಂದೆ ಇರುವ ದೊಡ್ಡ ಪಿತೂರಿ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸಲಿದೆ. ಸುಧಾರಿತ ಕೈಬಾಂಬ್, ಬಾಟಲಿ ಬಾಂಬ್, ಲಾಂಚರ್ ಮತ್ತಿತರ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಗಲಭೆ ಹಿಂದೆ ದೊಡ್ಡ ಪಿತೂರಿ ಇದೆ ಎಂಬ ಶಂಕೆ ದಟ್ಟವಾಗಿದೆ.

ಹಿಂಸಾಚಾರದ ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಮೇಲ್ವಿಚಾರಣೆಗೆ 18 ಮಂದಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳನ್ನು ನಿಯೋಜಿಸಲಾಗಿದೆ.
ದಿಲ್ಲಿ ಲೆಫ್ಟಿನೆಂಟ್ ಗವರ್ನರ್‌ ಗುರುವಾರ ಪರಿಸ್ಥಿತಿ ಅವಲೋಕಿಸಿ, ಸೂಕ್ತ ಭದ್ರತಾ ವ್ಯವಸ್ಥೆ ಮುಂದುವರಿಸುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News