15 ದಿನಗಳೊಳಗೆ ಕಳಸಾ- ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ಕ್ರಮ: ಸಚಿವ ರಮೇಶ್ ಜಾರಕಿಹೊಳಿ

Update: 2020-02-28 12:44 GMT

ಬೆಂಗಳೂರು, ಫೆ. 28: ಮಹದಾಯಿ ನ್ಯಾಯಾಧೀಕರಣ ತೀರ್ಪಿನನ್ವಯ ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಇನ್ನು 15ದಿನದೊಳಗೆ ಕಳಸಾ- ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯಷ್ಟೇ ರಾಜ್ಯದ ನಿಯೋಗ ಕೇಂದ್ರ ಜಲಸಂಪನ್ಮೂಲ ಸಚಿವ ಬೈರೋನ್ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಅಧಿಸೂಚನೆ ಹೊರಡಿಸಲು ಮನವಿ ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಅಧಿಸೂಚನೆ ಹೊರಡಿಸಿದೆ ಎಂದರು.

ನ್ಯಾಯಾಧೀಕರಣ ಕರ್ನಾಟಕ ರಾಜ್ಯಕ್ಕೆ 13 ಟಿಎಂಸಿ, ಗೋವಾಕ್ಕೆ 33 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಮಹದಾಯಿ ತೀರ್ಪಿಗೆ ತಕರಾರು ತೆಗೆದು ಮಹಾರಾಷ್ಟ್ರ, ಗೋವಾ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಫೆ.20ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದ್ದು, ಮಹದಾಯಿ ತೀರ್ಪಿನ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆದೇಶ ನೀಡಿತ್ತು.

ಕಳಸಾ-ಬಂಡೂರಿ ಅಣೆಕಟ್ಟುಗಳ ನಿರ್ಮಾಣಕ್ಕೆ ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ದಪಡಿಸಲಾಗಿದೆ. ಅದನ್ನು ಪರಿಷ್ಕರಿಸಿ ಸುಪ್ರೀಂ ಕೋರ್ಟ್, ಕೇಂದ್ರದ ಗಮನಕ್ಕೆ ತಂದು ಕೂಡಲೇ ಯೋಜನೆ ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಯೋಜನೆ ಆರಂಭಕ್ಕೆ ಕೇಂದ್ರದಿಂದ ಮೂರು ರೀತಿಯ ಅನುಮತಿಗಳ ಅಗತ್ಯವಿದೆ. ಅದಕ್ಕೂ ಎಲ್ಲ ಪ್ರಯತ್ನ ನಡೆಸಲಾಗುವುದು ಎಂದರು.

ಅನುದಾನ ಮೀಸಲು: ಕಳಸಾ-ಬಂಡೂರಿ ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಲಾಗುವುದೆಂದ ಅವರು, ಯೋಜನೆಗೆ ಸಂಬಂಧ ಕೆಲ ವಿಚಾರ ಬಹಿರಂಗಪಡಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಗೋವಾ ಸರಕಾರ ತಕರಾರು ಅರ್ಜಿ ಸಲ್ಲಿಸಿದರೆ ಮಾತುಕತೆಗೆ ಮನವೊಲಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. 15 ದಿನಗಳೊಳಗಾಗಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಸಮಗ್ರ ಸಿದ್ಧತೆಗಳನ್ನು ಹೊಸ ರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

‘ಮಹದಾಯಿ ಹೋರಾಟಗಾರರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕೆಂಬುದು ನಮ್ಮ ಒತ್ತಾಯ. ಈ ಸಂಬಂಧ ಸಿಎಂ ಜತೆ ಚರ್ಚಿಸಿ ಶೀಘ್ರವೇ ಪ್ರಕರಣ ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು’

-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News