20 ಕ್ವಿಂಟಾಲ್ ತೊಗರಿ ಖರೀದಿಗೆ ಕೇಂದ್ರಕ್ಕೆ ಮನವಿ: ಗೋವಿಂದ ಕಾರಜೋಳ

Update: 2020-02-28 12:52 GMT

ಕಲಬುರಗಿ, ಫೆ.28: ಈ ಬಾರಿ ತೊಗರಿ ಬೆಳೆ ಉತ್ತಮ ಇಳುವರಿ ಬಂದಿರುವುದುದರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 10 ಕ್ವಿಂಟಾಲ್ ಬದಲಾಗಿ 20 ಕ್ವಿಂಟಾಲ್ ತೊಗರಿ ಖರೀದಿ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಸಲ್ಲಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಶುಕ್ರವಾರ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ಹೆಚ್ಚಿನ ಖರೀದಿಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಕಳೆದ ಬಾರಿ ರಾಜ್ಯ ಸರಕಾರದ 300 ರೂ.ಸೇರಿ ತೊಗರಿಗೆ ಒಂದು ಕ್ವಿಂಟಲ್‌ಗೆ 6100 ರೂ.ಕನಿಷ್ಠ ಬೆಂಬಲ ಬೆಲೆ ನೀಡಲಾಗಿತ್ತು ಎಂದರು.

ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಕಲಬುರಗಿ, ಬೀದರ್, ವಿಜಯಪುರ, ರಾಯಚೂರು, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಉತ್ತಮ ಇಳುವರಿ ಬಂದಿದೆ. ಹೆಚ್ಚೆಚ್ಚು ಖರೀದಿ ಮಾಡಬೇಕೆಂಬುದು ರೈತರ ಬೇಡಿಕೆ ಇದೆ. ಈ ಕುರಿತು ಕೇಂದ್ರ ಸರಕಾರಕ್ಕೆ ಕೋರಲಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ ತಲೆದೋರಿದ್ದ ಪ್ರವಾಹ ಸಂಬಂಧ 2.5 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಈ ಪರಿಹಾರ ಹಣದಲ್ಲಿ ಜೇವರ್ಗಿ ಮತ್ತು ಅಫ್ಝಲ್‌ಪುರ ನೆರೆಪೀಡಿತ ಪ್ರದೇಶಗಳಲ್ಲಿ ಸದ್ಯಕ್ಕೆ ತಾತ್ಕಾಲಿಕ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಹಲವು ದಿನಗಳಿಂದ ಖಾಲಿ ಇರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರ ಹುದ್ದೆಯನ್ನು ಬರುವ ಎಪ್ರಿಲ್ ಒಳಗಾಗಿ ತುಂಬಲಾಗುವುದು. ಶಾಸಕರು ಅಥವಾ ಸಚಿವರ ನೇಮಕ ಮಾಡುವ ಸಂಬಂಧ ಕಾಯ್ದೆಗೆ ಸಣ್ಣ ತಿದ್ದುಪಡಿ ತರುವ ಹಿನ್ನೆಲೆಯಲ್ಲಿ ನೇಮಕ ಪ್ರಕ್ರಿಯೆ ಸ್ವಲ್ಪವಿಳಂಬವಾಗಿದೆ ಎಂದು ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ಮಹದಾಯಿ ನ್ಯಾಯಾಧೀಕರಣದ ಅಂತಿಮ ಐ ತೀರ್ಪಿನ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ಆದೇಶದನ್ವಯ ಕೇಂದ್ರ ಸರಕಾರ ಪ್ರಕಟಿಸುವುದರಿಂದ ಶಾಶ್ವತ ಪರಿಹಾರ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, 13.42 ಟಿಎಂಸಿ ನೀರು ಹಂಚಿಕೆಯಾಗುವ ಮೂಲಕ ಕರ್ನಾಟಕ ಹಾಗೂ ಈ ನಾಡಿನ ರೈತರಿಗೆ ಸಿಕ್ಕ ಜಯ ಎಂದರು.

ಜಲವಿದ್ಯುತ್ ಯೋಜನೆಗೆ 8.02 ಟಿಎಂಸಿ, ಬಂಡೂರಿ ನಾಲೆಗೆ 2.18 ಟಿಎಂಸಿ, ಕಳಸಾ ನಾಲೆಗೆ 1.70 ಟಿಎಂಸಿ, ಕುಡಿಯುವ ನೀರಿಗಾಗಿ 1.5 ಟಿಎಂಸಿ ಸೇರಿ ಒಟ್ಟು 13.42 ಟಿಎಂಸಿ ಹಂಚಿಕೆಯಾಗಿದೆ. ಈ ನೀರಿನಲ್ಲಿ ಒಂದು ಹನಿಯೂ ವ್ಯರ್ಥವಾಗದ ರೀತಿಯಲ್ಲಿ ಉಪಯೋಗ ಮಾಡಲಿಕ್ಕೆ ರಾಜ್ಯ ಸರಕಾರ ಕ್ರಿಯಾ ಯೋಜನೆ ರೂಪಿಸಲಿದೆ ಎಂದು ಅವರು ಹೇಳಿದರು.

ಈ ಬಾರಿ ಆಯವ್ಯಯದಲ್ಲಿ ಲೋಕೋಪಯೋಗಿ ಇಲಾಖೆಗೆ 15 ಸಾವಿರ ಕೋಟಿ ರೂ. ಅನುದಾನ ತೆಗೆದಿರಿಸುವಂತೆ ಮನವಿ ಸಲ್ಲಿಸಲಾಗಿದೆ. ನೆರೆಹಾವಳಿಯಿಂದಾಗಿ ಅಂದಾಜು 7021 ಕೋಟಿ ರೂ. ಗಳ ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ. ಕಳೆದ ವರ್ಷ ಇಲಾಖೆಗೆ 9450 ಕೋಟಿ ರೂ. ಅನುದಾನ ಹಂಚಿಕೆಯಾಗಿತ್ತು. ನೆರೆ ಹಾವಳಿಗೆ ಹಾನಿಗೀಡಾದ ರಸ್ತೆ, ಸೇತುವೆಗಳ ದುರಸ್ತಿಗಾಗಿ ಹೆಚ್ಚಿನ ಅನುದಾನಕ್ಕಾಗಿ 15 ಸಾವಿರ ಕೋಟಿ ರೂ. ಬೇಡಿಕೆ ಇಡಲಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಸವರಾಜ್ ಮುತ್ತಿಮೂಡ್, ದತ್ತಾತ್ರೇಯ ಪಾಟೀಲ್ ರೇವೂರ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News