ಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಅದ್ದೂರಿ ಚಾಲನೆ: ಸಿಎಂ, ಗಣ್ಯರು ಗೈರು

Update: 2020-02-28 13:01 GMT

ಚಿಕ್ಕಮಗಳೂರು, ಫೆ.28: ಜಿಲ್ಲಾ ಉತ್ಸವ-2020 ಕಾರ್ಯಕ್ರಮಕ್ಕೆ ನಗರದಲ್ಲಿ ಚಾಲನೆ ಸಿಕ್ಕಿದ್ದು, ಉತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ನಾಟಕೋತ್ಸವ, ಸಿನೆಮೋತ್ಸವ, ಆಹಾರಮೇಳ, ವಸ್ತು ಪ್ರದರ್ಶನ, ಹೆಲಿಟೂರಿಸಂ, ಪ್ಯಾರಾ ಗ್ಲೈಡಿಂಗ್ ಹಾಗೂ ಬೀದಿ ನಾಟಕೋತ್ಸವಗಳು ಅದ್ದೂರಿಯಾಗಿ ಉದ್ಘಾಟನೆಗೊಂಡವು.

ಇಂದಿನಿಂದ ಮಾ.1ರವರೆಗೆ ಮೂರು ದಿನಗಳ ಕಾಲ ನಡೆಯುವ ಜಿಲ್ಲಾ ಉತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಉತ್ಸವದ ಭಾಗವಾಗಿ ಹೆಲಿಟೂರಿಸಂಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಹೆಲಿಟೂರಿಸಂಗೆ ಜಿಲ್ಲಾಡಳಿತ ಮೊದಲು ಒಪ್ಪಂದ ಮಾಡಿಕೊಂಡಿದ್ದ ಎವಿಯೇಶನ್ ಸಂಸ್ಥೆಯು ಗ್ರಾಹಕರ ನೋಂದಾವಣಿ ಕೊರತೆಯ ನೆಪವೊಡ್ಡಿ ನಷ್ಟವಾಗುತ್ತದೆ ಎಂದು ಒಪ್ಪಂದವನ್ನು ರದ್ದು ಮಾಡಿತ್ತು. ಇದರಿಂದಾಗಿ ಬೆಳಗ್ಗೆ ನಿಗದಿತ ಸಮಯಕ್ಕೆ ಹೆಲಿಟೂರಿಸಂ ಆರಂಭವಾಗದೇ ಐಡಿಎಸ್‍ಜಿ ಕಾಲೇಜು ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಮಾರಿಕಾಂಬ ಜಾತ್ರಾ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಹೆಲಿಟೂರಿಸಂ ಕಾರ್ಯಕ್ರಮಕ್ಕೆ ಬಂದಿದ್ದ ತುಂಬೆ ಎವಿಯೇಶನ್ ಸಂಸ್ಥೆಯೊಂದಿಗೆ ಜಿಲ್ಲಾಡಳಿತ ಮಾತುಕತೆ ನಡೆಸಿದ್ದರಿಂದ ಮಧ್ಯಾಹ್ನದ ವೇಳೆಗೆ ಒಂದು ಹೆಲಿಕಾಪ್ಟರ್ ನಗರಕ್ಕೆ ಆಗಮಿಸಿತು. ಬಳಿಕ ಮಧ್ಯಾಹ್ನ 2:30ಕ್ಕೆ ಮೊದಲೇ ನೋಂದಾಯಿಸಿಕೊಂಡಿದ್ದ ನಗರದ 6 ಮಂದಿಯನ್ನು ಕೂರಿಸಿಕೊಂಡ ಹೆಲಿಕಾಪ್ಟರ್ 15 ನಿಮಿಷಗಳ ಹಾರಾಟ ನಡೆಸುವ ಮೂಲಕ ಹೆಲಿಟೂರಿಸಂ ಸಂಜೆವರೆಗೆ ಸಾಂಗವಾಗಿ ನಡೆಯಿತು.

ಹೆಲಿಟೂರಿಸಂನೊಂದಿಗೆ ನಗರದ ಎಐಟಿ ಕಾಲೇಜು ಆವರಣದಲ್ಲಿ ಪ್ಯಾರಾ ಮೋಟರ್ ಗ್ಲೈಡಿಂಗ್ ಹಾಗೂ ನಗರಸ ಸಮೀಪದ ಮಾಣಿಕ್ಯಧಾರದ ಬೆಟ್ಟದಲ್ಲಿ ಆಯೋಜಿಸಲಾಗಿದ್ದು, ಮುಗಿಲೆತ್ತರದ ಬೆಟ್ಟದಿಂದ ಪ್ಯಾರಾಚೂಟ್‍ಗಳನ್ನು ಕಟ್ಟಿಕೊಂಡು ಪಾತಾಳದಂತೆ ಕಾಣುತ್ತಿದ್ದ ಆಳಕ್ಕೆ ಧುಮುಕುತ್ತಿದ್ದ ಸಾಹಸ ಪ್ರದರ್ಶನ ನೋಡುಗರ ಎದೆ ನಡುಗಿಸುವಂತಿತ್ತು.

ಇದೇ ವೇಳೆ ನಗರದ ಹೃದಯ ಭಾಗದಲ್ಲಿರುವ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ನಾಟಕೋತ್ಸವ ಕಾರ್ಯಕ್ರಮಕ್ಕೆ ಚಲನಚಿತ್ರ ನಟ ಸಂಚಾರಿ ವಿಜಯ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಪಂ ಸದಸ್ಯೆ ಸುಜಾತಾ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಡಿಸಿ ಡಾ.ಕುಮಾರ್ ಚಾಲನೆ ನೀಡಿದರು. ನಾಟಕೋತ್ಸವದ ಅಂಗವಾಗಿ ನೀನಾಸಂನ ಪ್ರತಿಭಾ ನಿರ್ದೇಶನದಲ್ಲಿ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ರಾಜರ ಕಾಲದಲ್ಲಿ ನಡೆದಿದ್ದ ಬಳಲಿಯಕ್ಕಮ್ಮ ಎಂಬ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಚಿತೆ ಏರುವ ಸತ್ಯ ಕತೆ ಆಧರಿಸಿದ ಹಗರಣ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ನಾಟಕೋತ್ಸವಕ್ಕೆ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಸಾಕ್ಷಿಯಾಗಿದ್ದು, ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವ ಮೂಲಕ ಜಿಲ್ಲಾ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಂತಾಯಿತು. ಹಗರಣ ನಾಟಕದ ಬಳಿಕ ಆಷಾಡದಲ್ಲಿ ಒಂದು ದಿನ ನಾಟಕ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಇತಿಹಾಸ ದರ್ಶನ ಮಾಡುವ ಧ್ವನಿ, ಬೆಳಕಿನ ಪ್ರದರ್ಶನ ನಡೆಯಿತು.

ನಾಟಕೋತ್ಸವದ ಬೆನ್ನಲ್ಲೇ ಸಿನೆಮೋತ್ಸವ ಕಾರ್ಯಕ್ರಮವನ್ನು ಇದೇ ಗಣ್ಯರು ಉದ್ಘಾಟಿಸಿದರು. ಸಿನೆಮೋತ್ಸವದಲ್ಲಿ ನಗರದ ನಾಗಲಕ್ಷ್ಮೀ, ಗುರುನಾಥ ಚಿತ್ರಮಂದಿರಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಿನಿಮಾ ಪ್ರದರ್ಶವನ್ನು ಏರ್ಪಡಿಸಲಾಗಿದ್ದು, ಮೊದಲ ದಿನ ಮೂಕಜ್ಜಿಯ ಕನಸುಗಳು, ರಾಮಾ ರಾಮಾ ರೇ ಎಂಬ ಪ್ರಶಸ್ತಿ ವಿಜೇತ ಸಿನೆಮಾಗಳ ಪ್ರದರ್ಶನ ನಡೆಯಿತು. ನಗರದ ಸಾವಿರಾರು ಸಿನೆಮಾ ಪ್ರಿಯರು ಉಚಿತ ಸಿನೆಮಾ ಪ್ರದರ್ಶನದಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರಗು ನೀಡಿದರು.

ಬಳಿಕ ಜಿಲ್ಲಾ ಆಟದ ಮೈದಾನದ ಸಮೀಪದಲ್ಲಿ ಆಯೋಜಿಸಲಾಗಿರುವ ಆಹಾರಮೇಳ ಹಾಗೂ ವಸ್ತು ಪ್ರದರ್ಶನವನ್ನು ಶಾಸಕ ಪ್ರಾಣೇಶ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಉದ್ಘಾಟಿಸಿದರು. ಚಿತ್ರನಟ ಸಂಚಾರಿ ವಿಜಯ್ ಈ ವೇಳೆ ಉಪಸ್ಥಿತರಿದ್ದು, ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾದರು. ಆಹಾರ ಮೇಳದಲ್ಲಿ ಆಕರ್ಷಕ ಪಗೋಡಾಗಳಿಂದ ನಿರ್ಮಿಸಲಾದ ನೂರಕ್ಕೂ ಹೆಚ್ಚು ಮಳಿಗೆಗಳು ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳ ಆಹಾರ ಪದಾರ್ಥಗಳನ್ನು ಸ್ಥಳದಲ್ಲೇ ತಯಾರಿಸಿ ಆಹಾರ ಪ್ರಿಯರಿಗೆ ಉಣ ಬಡಿಸಲು ಸಜ್ಜಾಗಿದ್ದ ದೃಶ್ಯಗಳು ಕಂಡು ಬಂದವು. ಮೇಳದಲ್ಲಿ ಸ್ಥಳೀಯ ತಿಂಡಿ ತಿನಿಸುಗಳೂ ಸೇರಿದಂತೆ ಮಾಂಸಾಹಾರ ಖಾದ್ಯಗಳೂ ಆಹಾರ ಪ್ರಿಯರನ್ನು ಆಕರ್ಷಿಸುತ್ತಿದ್ದವು. ನಾಗರಿಕರು, ಕಾಲೇಜು ವಿದ್ಯಾರ್ಥಿಗಳು ಗುಂಪುಗುಂಪಾಗಿ ಬಂದು ಬಗೆಬಗೆಯ ಖಾದ್ಯಗಳನ್ನು ಸವಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಇನ್ನು ಜಿಲ್ಲಾ ಆಟದ ಮೈದಾನದ ಆವರಣದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳ ಮೂಲಕ ವಸ್ತುಪ್ರದರ್ಶನ ಮತ್ತು ಮಾರಾಟ, ಸರಕಾರಿ ಇಲಾಖೆಗಳ ಯೋಜನೆಗಳ ಮಾಹಿತಿ ನೀಡುವ ಮಳಿಗೆಗೆಳು, ಕೃಷಿ ಇಲಾಖೆಯಿಂದ ಆಲೆಮನೆ, ಅಡಿಕೆ ಮರಕ್ಕೆ ರಿಮೋಟ್ ಕಂಟ್ರೋಲ್ ಮೂಲಕ ಔಷಧ ಸಿಂಪಡಣೆ, ಸ್ಥಳದಲ್ಲೇ ಮಡಿಕೆ ಮಾಡುವ ಕುಂಬಾರಿಕೆ, ಕೈಮಗ್ಗದ ಮೂಲಕ ಬಟ್ಟೆ ನೇಯುವ ಪ್ರಾತ್ಯಕ್ಷಿಕೆಗಳು ಹಾಗೂ  ಸಿರಿಧಾನ್ಯಗಳು, ಗೃಹೋಪಯೋಗಿ ವಸ್ತುಗಳು, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ಮೊರಾರ್ಜಿ ವಸತಿಯ ಶಾಲಾ ಕಟ್ಟಡದ ಮಾದರಿ, ಕವಿಗಳು ಮತ್ತು ರಾಷ್ಟ್ರ ನಾಯಕರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ, ಆಯುರ್ವೇಧ ಔಷಧ ಮಳಿಗೆ ವಸ್ತು ಪ್ರದರ್ಶನದ ಆಕರ್ಷಣೆಯಾಗಿದ್ದವು. ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಮಳಿಗೆಗೆಳತ್ತ ದೌಡಾಯಿಸುತ್ತಿದ್ದ ದೃಶ್ಯ ಈ ವೇಳೆ ಕಂಡು ಬಂತು.

ಜಿಲ್ಲಾ ಉತ್ಸವದ ಅಂಗವಾಗಿ ಶುಕ್ರವಾರ ಬೀದಿ ಉತ್ಸವಕ್ಕೂ ಶುಕ್ರವಾರ ಬೆಳಗ್ಗೆ ಚಾಲನೆ ನೀಡಲಾಗಿದ್ದು, ನಗರದ ಎಂ.ಜಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ನಾಲ್ಕು ಆಕರ್ಷಕ ವೇದಿಕೆಗಳಲ್ಲಿ ದೊಂಬರಾಟ, ಜಾದೂ ಪ್ರದರ್ಶನ, ನೃತ್ಯ ಸೇರಿದಂತೆ ಜಾನಪದ ಕಲಾ ತಂಡಗಳ ಕುಣಿತಗಳನ್ನು ಆಯೋಜಿಸಲಾಗಿತ್ತು. ಬೀದಿ ಉತ್ಸವದ ಹಿನ್ನೆಲೆಯಲ್ಲಿ ಎಂಜಿ. ರಸ್ತೆಯನ್ನು ವಾಹನ ಸಂಚಾರ ಮುಕ್ತ ಪ್ರದೇಶ ಮಾಡಲಾಗಿದ್ದು, ಸಾರ್ವಜನಿಕರು ಇಡೀ ರಸ್ತೆಯಲ್ಲಿ ನಡೆದಾಡುತ್ತಾ ಬೀದಿ ಉತ್ಸವದ ಸೊಬಗನ್ನು ಕಣ್ಣುಂಬಿಕೊಂಡರು. ಒಟ್ಟಾರೆ ನಗರದಲ್ಲಿ ಶುಕ್ರವಾರ ಜಿಲ್ಲಾ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಉತ್ಸವಗಳಿಗೆ ಚಾಲನೆ ಸಿಕ್ಕಿದ್ದು, ಇಂದಿನಿಂದ ಮೂರು ದಿನಗಳ ಕಾಲ ಈ ಉತ್ಸವ ಜಿಲ್ಲೆಯ ಜನರನ್ನು ರಂಜಿಸಲಿದೆ. 

ಸಿಎಂ, ಗಣ್ಯರು ಗೈರು
ಜಿಲ್ಲಾ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ.ಅಶ್ವತ್ ನಾರಾಯಣ ಬರಬೇಕಿತ್ತು. ಆದರೆ ಬೆಳಗ್ಗೆಯಿಂದ ಸಂಜೆ ವರೆಗೆ ಈ ಗಣ್ಯರ ಪೈಕಿ ಯಾರೂ ಜಿಲ್ಲಾ ಉತ್ಸವಕ್ಕೆ ಆಗಮಿಸಲೇ ಇಲ್ಲ. ಪರಿಣಾಮ ಜಿಲ್ಲಾ ಉತ್ಸವದ ವಿವಿಧ ಕಾರ್ಯಕ್ರಮಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಉದ್ಘಾಟಿಸುವಂತಾಗಿತ್ತು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕೂಡ ನಗರದಲ್ಲಿ ಕಾಣಿಸಿಕೊಳ್ಳದೇ ನಾಪತ್ತೆಯಾಗಿದ್ದರು. ಸಂಜೆ 4ಕ್ಕೆ ನಗರದಲ್ಲಿ ನಡೆದ ಕಲಾತಂಡಗಳ ಮೆರವಣಿಗೆಯಲ್ಲಿ ಪ್ರತ್ಯಕ್ಷವಾದ ಸಿ.ಟಿ.ರವಿ ಮೆರವಣಿಗೆಯನ್ನು ಉದ್ಘಾಟಿಸಿದ್ದರು. 

ಹೆಲಿಟೂರಿಸಂ ವಿಳಂಬ-ಗೊಂದಲ:
ಜಿಲ್ಲಾ ಉತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ಆಯೋಜಿಸಲಾಗಿದ್ದ ಹೆಲಿಟೂರಿಸಂ ಕೆಲ ಹೊತ್ತು ಗೊಂದಲದ ಗೂಡಾಗಿತ್ತು. ಹೆಲಿಕಾಪ್ಟರ್ ನಿಗದಿತ ಸಮಯಕ್ಕೆ ಬಾರದ ಪರಿಣಾಮ ಮೊದಲ ಬಾರಿಗೆ ಹೆಲಿಕಾಪ್ಟರ್ ಪ್ರಯಾಣ ಮಾಡಲು ಮೊದಲೇ ಹೆಸರು ನೋಂದಾಯಿಸಿಕೊಂಡು ತುದಿಗಾಲಲ್ಲಿ ನಿಂತಿದ್ದ ನಾಗರಿಕರನ್ನು ನಿರಾಶೆಗೊಳಿಸಿತು. ಬೆಳಗ್ಗೆ 12ರ ವೇಳೆಗೆ ಹೆಲಿಕಾಪ್ಟರ್ ಬಂತಾದರೂ ಮಧ್ಯಾಹ್ನ 2:30ರಿಂದ ಹಾರಾಟ ಆರಂಭ ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದರಿಂದ ನಾಗರಿಕರು ಸುಮಾರು 2 ಗಂಟೆಗಳ ಕಾಲ ಐಡಿಎಸ್‍ಜಿ ಕಾಲೇಜು ಆವರಣದಲ್ಲಿ ಸುಮ್ಮನೆ ಕೂರುವಂತಾಯಿತು. ಮಧ್ಯಾಹ್ನ ಹೆಲಿಕಾಪ್ಟರ್ ಹಾರಾಟ ಆರಂಭವಾಗುವ ಹೊತ್ತಿಗೆ ಮೊದಲು ನೋಂದಾವಣೆ ಮಾಡಿದ್ದವರನ್ನು ಬಿಟ್ಟು ಮಧ್ಯದಲ್ಲಿ ಬಂದು ನೋಂದಾಯಿಸಿಕೊಂಡ ಪ್ರಭಾವಿಯೊಬ್ಬರಿಗೆ ಮೊದಲ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಂಸ್ಥೆಯ ಸಿಬ್ಬಂದಿ ಹಾಗೂ ಮೊದಲು ನೋಂದಾಯಿಸಿಕೊಂಡವರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಬಳಿಕ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಅಧಿಕಾರಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರಿಂದ ಪರಿಸ್ಥಿತಿ ಶಾಂತವಾಯಿತು. ಬಳಿಕ ಪ್ರತೀ 15 ನಿಮಿಷಗಳ ಕಾಲ 6 ಮಂದಿಯೊಂದಿಗೆ ಹೆಲಿಕಾಪ್ಟರ್ ಮುಳ್ಳಯ್ಯನಗಿರಿ ಹಾಗೂ ನಗರದ ಪ್ರದಕ್ಷಿಣೆ ಹಾಕಲಾರಂಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News