ದಾವಣಗೆರೆ: ಶಾಸಕ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹ; ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

Update: 2020-02-28 13:24 GMT

ದಾವಣಗೆರೆ, ಫೆ.28: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಬಸವನಗೌಡ ಯತ್ನಾಳ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. 

ಇಲ್ಲಿನ ಎಸಿ ಕಚೇರಿ ಬಳಿ ಜಮಾಯಿಸಿದ ಸದಸ್ಯರು ಯತ್ನಾಳ್ ವಿರುದ್ದ ಘೋಷಣೆಗಳನ್ನು ಕೂಗಿ ನಂತರ, ಸರಕಾರಕ್ಕೆ ಮನವಿ ಸಲ್ಲಿಸಿದರು.  
ಶಾಸಕ ಯತ್ನಾಳ್ ಸ್ವಾತಂತ್ರ್ಯ ಚಳವಳಿಯನ್ನು ಅವಮಾನಿಸುವ ರೀತಿಯಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಬಗ್ಗೆ ಅತ್ಯಂತ ಆಕ್ಷೇಪಾರ್ಹವಾಗಿ ಮಾತನಾಡಿರುವುದು ಖಂಡನೀಯ. 102 ವರ್ಷಗಳ ಹಿರಿಯ ಜೀವ, ನಾಡಿನ ಸಾಕ್ಷಿಪ್ರಜ್ಞೆ, ಎಲ್ಲ ಜನಪರ ಚಿಂತನೆ-ಚಳವಳಿಗಳ ಒಡನಾಡಿಯಾಗಿರುವ ದೊರೆಸ್ವಾಮಿಯವರು ಕರ್ನಾಟಕಕ್ಕೆ ಮಾತ್ರವಲ್ಲ, ನಮ್ಮ ದೇಶದ ಆಸ್ತಿ. ನಮ್ಮೆಲ್ಲರ ಹೆಮ್ಮೆ. ಅಂತಹವರ ಕುರಿತಾಗಿ, ಯಾವುದೇ ಒಳ್ಳೆಯ ಕೆಲಸ ಮಾಡಿರದ, ಜನರ ಪರವಾದ ಚಿಂತನೆಯಾಗಲಿ, ಕ್ರಿಯೆಯಾಗಲಿ ಇಲ್ಲದ ಒಬ್ಬ ವ್ಯಕ್ತಿ ಈ ರೀತಿಯ ಮಾತುಗಳನ್ನಾಡುವುದು ಅತ್ಯಂತ ಆಕ್ಷೇಪಾರ್ಹವಾದುದು ಎಂದು ಪ್ರತಿಭಟನಾಕಾರರು ಹೇಳಿದರು.  

ಈಗ ಶಾಸಕರಾಗಿರುವ ಯತ್ನಾಳ್ ಚುನಾವಣಾ ಆಯೋಗಕ್ಕೆ ಕೊಟ್ಟ ಮಾಹಿತಿಯ ಪ್ರಕಾರ, ಅವರ ವಿರುದ್ಧ 'ವಂಚನೆ, ಶಾಂತಿಗೆ ಭಂಗ ತಂದಿರುವುದು, ಗಲಭೆಗೆ ಕುಮ್ಮಕ್ಕು' ಸೇರಿದಂತೆ ಸುಮಾರು 23 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇಂತಹ ವ್ಯಕ್ತಿ ದೊರೆಸ್ವಾಮಿಯಂತಹ ಪ್ರಾಮಾಣಿಕ, ಸಜ್ಜನ, ಬದ್ಧತೆಯುಳ್ಳ ಹೋರಾಟಗಾರರನ್ನು 'ಪಾಕಿಸ್ತಾನದ ಏಜೆಂಟ್, ಆತ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ, ಅವನು ಗುಂಡಿಗೆ ಬಲಿಯಾಗುತ್ತಾನೆ' ಇತ್ಯಾದಿಯಾಗಿ ಏಕವಚನದಲ್ಲಿ ಮಾತಾಡಿರುವುದು ಕನ್ನಡಿಗರಾದ ನಮ್ಮೆಲ್ಲರಲ್ಲಿ ಅಪಾರ ಆಕ್ರೋಶ ಹುಟ್ಟಿಸಿದೆ. ಶಾಸಕರ ಮಾತುಗಳು ಸ್ವಾತಂತ್ರ್ಯ ಚಳವಳಿಗೇ ಬಗೆದ ಅಪಚಾರವಾಗಿದೆ. ಆದ್ದರಿಂದ ಸಂವಿಧಾನ ವಿರೋಧಿಯಾದ ಈ ಎಲ್ಲ ಬೆಳವಣಿಗೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು. 

ಭಾರತ ಎಂದಿಗೂ ಶಾಂತಿ-ಸಹಬಾಳ್ವೆಯ ನಾಡಾಗಿ ಉಳಿಯಬೇಕು ಮತ್ತು ಹಾಗಾದಾಗ ನಾವು ನಿಜವಾಗಿಯೂ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಆದ್ದರಿಂದ ಆಕ್ಷೇಪಾರ್ಹವಾಗಿ ಮಾತನಾಡಿದ್ದಕ್ಕೆ ಕಾನೂನು ರೀತಿಯ ಕ್ರಮ ಜರುಗಿಸಬೇಕು. ಯತ್ನಾಳ್ ಮೇಲೆ ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆಯೂ ಕ್ರಮ ಕೈಗೊಳ್ಳಬೇಕು. ಶಾಸಕ ಸ್ಥಾನದಿಂದ ಪದಚ್ಯುತಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಟಿ.ಅಸ್ಗರ್, ಮಹಮದ್ ಆಲಿ ಸೈಯದ್, ಶ್ರೀನಿವಾಸ್, ನಝೀಮದ್ದೀನ್, ಮುಹಮದ್ ಜಾಫರ್, ಮುಹಮದ್ ಸಲೀಂ, ಇಸ್ಮಾಯಿಲ್ ಜಬೀವುಲ್ಲಾ, ಕರಿಬಸಪ್ಪ, ಜಬೀನಾಖಾನಂ, ಅನ್ವರ್ ಖಾನ್, ಪವಿತ್ರ, ಅಬ್ದುಲ್ ಘನಿ, ಸಾಗರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News