ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ: ಸಾವಿಗೆ ಕಾರಣವಾಯಿತೇ ಪರೀಕ್ಷೆಯ ಭಯ ?

Update: 2020-02-28 17:15 GMT

ಮೈಸೂರು,ಫೆ.28: ತಾಲೂಕಿನ ಬಿಳುಗಲಿ ಗ್ರಾಮದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗುರುವಾರ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ನಂಜನಗೂಡು ತಾಲೂಕಿನ ಬೆಳಿಗೆರೆ ಹೋಬಳಿ ವ್ಯಾಪ್ತಿಗೆ ಸೇರಿದ ಬಿಳುಗಲಿ ಎಂಬ ಗ್ರಾಮದ ನಾಗಯ್ಯ ಎಂಬವರ ಮಗಳು ಪ್ರಿಯಾಂಕ (18) ಮೃತ ವಿದ್ಯಾರ್ಥಿನಿ.

ಪ್ರಿಯಾಂಕ ಟಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜಿನ ಕಲಾ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಪರೀಕ್ಷೆ ಬರೆಯಲು ಪ್ರವೇಶ ಪತ್ರವನ್ನು ಸಹ ತಂದಿದ್ದಳೆಂದು ಹೇಳಲಾಗುತ್ತಿದೆ. ಆದರೆ ಪರೀಕ್ಷೆ ಭಯದಿಂದಲೋ ಏನೋ ಇತ್ತೀಚಿಗೆ ಕೆಲವು ದಿನಗಳಿಂದ ಈಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳೆಂದು ಪೋಷಕರು ತಿಳಿಸಿದ್ದಾರೆ. 

ಈ ಸಂಬಂಧ ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮೈಸೂರಿನ ಕೆ.ಆರ್.ಎಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News