ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಣ್ಮರೆಯಾಗಿದೆ: ಸಿಎಂ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್

Update: 2020-02-28 18:00 GMT

ಮೈಸೂರು,ಫೆ.28: ಪ್ರಸಕ್ತ ದಿನದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಕಣ್ಮರೆಯಾಗಿ ಸಂತತಿಯ ಆಡಳಿತ ಹೆಚ್ಚಾಗಿದ್ದು, ಇದು ಸದಾ ಕಾಲ ಮುಂದುವರಿದರೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯಕಾರಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಅಭಿಪ್ರಾಯಪಟ್ಟರು.

ಮಹಾರಾಜ ಕಾಲೇಜು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಜೂನಿಯರ್ ಬಿಎ ಹಾಲ್‍ನಲ್ಲಿ ಆಯೋಜಿಸಿದ್ದ ಭಾರತೀಯ ರಾಜಕಾರಣ ಎತ್ತ ಸಾಗುತ್ತಿದೆ ಎಂಬ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ರಾಜಕೀಯ ಇತಿಹಾಸ ನೋಡುವಾಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನಶಿ ಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಕೋನದಿಂದ ನೋಡಬೇಕಾಗಿದೆ. ಇವರಿಬ್ಬರೂ ಭಾರತೀಯ ರಾಜಕಾರಣದ ಧ್ರುವತಾರೆಗಳು. ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ನಂತರದಲ್ಲಿ ಬಂದ ಪ್ರಧಾನಿಗಳು ಒಂದಲ್ಲಾ ಒಂದು ರೀತಿಯಲ್ಲಿ ಬುನಾದಿಯನ್ನ ಗಟ್ಟಿಮಾಡುವ ಕೆಲಸ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ದೇಶದ ರಾಜಕೀಯ ಚಿತ್ರವಣವೇ ಬದಲಾಗಿದ್ದು, ಒಬ್ಬ ಪ್ರಭಾವಿ ರಾಜಕಾರಣೀಯ ಮಗನ ವಿರುದ್ದ ಒಬ್ಬ ಸಾಮಾನ್ಯ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ದೂರದ ಮತ್ತು ಕನಸಿನ ಮಾತಾಗಿದೆ. ಆದ್ದರಿಂದ ಒಬ್ಬ ಸಾಮಾನ್ಯ ವ್ಯಕ್ತಿ ಚುನಾವಣೆಯಲ್ಲಿ ಗೆಲ್ಲುವಂತಹ ವಾತವರಣ ದೇಶದಲ್ಲಿ ಇಂದು ಸೃಷ್ಟಿಯಾಗಬೇಕಿದೆ. ಸಾಮಾನ್ಯ ವ್ಯಕ್ತಿಯು ಹಣ, ಜಾತಿ, ತೋಳ್ಬಲದ ಸಹಾಯ ಇಲ್ಲದೆ ಜನರಿಂದ ಆರಿಸಿಹೋಗುವ ಪರಿಸ್ಥಿತಿ ಬರಬೇಕಿದೆ ಎಂದರು.

ಸ್ವಾತಂತ್ರ್ಯ ನಂತರ ಗಣರಾಜ್ಯವಾದ ನಮ್ಮ ದೇಶವು ಸಂವಿಧಾನವನ್ನು ಒಪ್ಪಿಕೊಂಡಿತು. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದ ಕಡೆ ಹೊರಳಿದ ಭಾರತದಲ್ಲಿ ಇಂದು ಪ್ರಜಾಪ್ರಭುತ್ವವೇ ಮರಣ ಹೊಂದಿದೆ. ಸಂತತಿಯ (ಕುಟುಂಬ) ಆಡಳಿತ ಜಾರಿಗೆ ಬಂದಿದೆ ಎಂದರು.

ಭಾರತ ಸಂವಿಧಾನದ 356 ನೇ ವಿಧಿಯನ್ನು ಇಂದು ಎಲ್ಲಾ ಪಕ್ಷಗಳು ದುರುಪಯೋಗ ಪಡಿಸಿಕೊಂಡು ವಿರೋಧ ಪಕ್ಷಗಳ ಸರಕಾರವನ್ನು ವಜಾಗೊಳಿಸಿವೆ. ಭಾರತದ ಜನತೆಗೆ ಇಂದು ಪ್ರಬಲವಾದ ಪಕ್ಷಗಳ ಅಗತ್ಯತೆ ಇದೆ. ಇಂದು ಭಾರತದಲ್ಲಿ ಸಂತತಿಯ ಆಡಳಿತ ಹಾಗೂ ಬಂಡವಾಳಶಾಯಿಯ ಪ್ರಭುತ್ವದಿಂದ ಭಾರತೀಯ ರಾಜಕೀಯ ವ್ಯವಸ್ಥೆ ನೆಲಕಚ್ಚಿ ಪ್ರಜಾಪ್ರಭುತ್ವ ವಿನಾಸದತ್ತ ಸಾಗುತ್ತಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.

ಪತ್ರಿಕೋದ್ಯಮ ಕ್ಷೇತ್ರವು ಸಮಾಜದ ಬೆಳವಣಿಗೆ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸ್ಥಾನ ನಿರ್ವಹಿಸಬೇಕಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾರತ ದೇಶದ ರಾಜಕೀಯ ಜೂತೆ ಭಾರತ ದೇಶದ ಪತ್ರಿಕೋದ್ಯಮದ ಇತಿಹಾಸವನ್ನು ತಿಳಿದುಕೊಂಡು ಸಮಾಜದ ಕನ್ನಡಿಯಾಗಬೇಕು. ಸಮಸ್ಯೆಗಳನ್ನು ಜಗತ್ತಿಗೆ ಪರಿಚಯಿಸುವಂತಹ ಸಾಹಸಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿಟಾ ವಿಮಲಾ ಬ್ರಾಗ್ಸ್, ಆಡಳಿತಾಧಿಕಾರಿ ಡಾ.ಜಿ.ಎಚ್. ನಾಗರಾಜ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಪ್ರಮೀಳಾ ಬಿ. ಕುನ್ನೂರು, ಅಧ್ಯಾಪಕ ಡಾ. ಗೋಪಾಲ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News