ರೈತರ ಸಾಲ ಮನ್ನಾ ಯೋಜನೆಗೆ ಸರಕಾರ ತಿಲಾಂಜಲಿ: ಎಚ್‌ಡಿಕೆ ಆಕ್ರೋಶ

Update: 2020-02-29 12:43 GMT

ಬೆಂಗಳೂರು, ಫೆ.29: ‘ರೈತರ ಸಾಲ ಮನ್ನಾ’ ಯೋಜನೆಗೆ ತಿಲಾಂಜಲಿ ಇಡಲು ಬಿಜೆಪಿ ಸರಕಾರ ಅಡ್ಡ ದಾರಿ ತುಳಿಯುತ್ತಿರುವುದು ಖಂಡನೀಯ. ರೈತರ ಬಾಳಿಗೆ ರಾಜ್ಯ ಬಿಜೆಪಿ ಸರಕಾರ ಕೊಳ್ಳಿ ಇಡಲು ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ದಾಖಲೆಗಳ ನೆಪವೊಡ್ಡಿ ಸಾಲ ಮನ್ನಾ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಕೈ ಬಿಡುವ ಮೂಲಕ ಬಿಜೆಪಿ ಸರಕಾರ ರೈತರಿಗೆ ದೋಖಾ ಮಾಡುತ್ತಿದೆ ಎಂದು ದೂರಿದ್ದಾರೆ.

ಸಾಲ ಮನ್ನಾದ ಬಗ್ಗೆ ಬಿಜೆಪಿಯ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮೀಸಲಿಟ್ಟಿದ್ದ 25 ಸಾವಿರ ಕೋಟಿ ರೂ. ಹಣವನ್ನು ಬಿಜೆಪಿ ಸರಕಾರ ಬೇರೆಡೆಗೆ ವರ್ಗಾಯಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದಲೂ ರಾಜ್ಯದ 1.53 ಲಕ್ಷ ರೈತರಿಗೆ ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಾಲ ಮನ್ನಾ ಬಗ್ಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ರೈತರ ಪರವಾಗಿ ನಿಲ್ಲುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸ್ಪಷ್ಟಣೆ: ರೈತರ ಸಾಲ ಮನ್ನಾ ವಿಷಯವಾಗಿ ಕೆಲವು ಊಹಾಪೋಹಗಳು ಹರಿದಾಡುತ್ತಿದ್ದು, ರೈತರು ಯಾವುದೆ ರೀತಿಯ ಆತಂಕಕ್ಕೆ ಒಳಗಾಗಬಾರದು. ರೈತರಿಗೆ ಅನ್ಯಾಯವಾಗಲು ಯಾವುದೆ ಕಾರಣಕ್ಕೂ ಬಿಡುವುದಿಲ್ಲ. ಸೂಕ್ತ ದಾಖಲೆ ಸಲ್ಲಿಸುವ ಎಲ್ಲ ರೈತರ ಸಾಲ ಮನ್ನಾ ಆಗಲಿದೆ. ಇದರಲ್ಲಿ ಯಾವುದೆ ಅನುಮಾನ ಬೇಡ. ಸರಕಾರ ರೈತರ ಪರವಾಗಿದ್ದು, ದಾರಿ ತಪ್ಪಿಸುವ ಹೇಳಿಕೆಗಳಿಗೆ ರೈತರು ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವಿಟರ್‌ನಲ್ಲಿ ವಿನಂತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News