34 ಮಂದಿ ಪ್ರಯಾಣಿಕರಿಗೆ ಕೆಎಸ್ಸಾರ್ಟಿಸಿಯಿಂದ ‘ಉಚಿತ ಟಿಕೆಟ್’

Update: 2020-02-29 11:54 GMT

ಬೆಂಗಳೂರು, ಫೆ. 29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಬಸ್‌ಗಳಲ್ಲಿ 2019ರಲ್ಲಿ ಅತಿಹೆಚ್ಚು ಇ-ಬುಕ್ಕಿಂಗ್ ಮೂಲಕ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಿದ 34 ಮಂದಿ ಪ್ರಯಾಣಿಕರಿಗೆ ನಿಗಮದ ಬಸ್‌ಗಳಲ್ಲಿ ಅವರ ಆಯ್ಕೆಯ ಯಾವುದಾದರೂ ಒಂದು ಸ್ಥಳಕ್ಕೆ ಹೋಗಿ-ಬರಲು ಉಚಿತ ಟಿಕೆಟ್ ನೀಡಿದೆ.

ಎರ್ನಾಕುಲಂನ ಸಗೀನ್ ಎಂಬವರು ಒಟ್ಟು 148 ಬಾರಿ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಒಟ್ಟು 1,78,703 ರೂ., ಹುಬ್ಬಳ್ಳಿಯ ಮಂಜುನಾಥರಾವ್-144 ಬಾರಿ ಪ್ರಯಾಣಿಸಿದ್ದು, ಒಟ್ಟು 1,22,289ರೂ. ಹಾಗೂ ಪಾಲಕಾಡ್‌ನ ಕೆ.ಎಚ್. ಪ್ರಮೋದ್ ಎಂಬವರು 144 ಬಾರಿ ಪ್ರಯಾಣಿಸಲು ಒಟ್ಟು 1,14,335 ರೂ.ಗಳನ್ನು ಸಂಸ್ಥೆಗೆ ಪಾವತಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪಾಲಕಾಡ್ ಮೂಲದ ಆರ್.ಶ್ರೀನು ಎಂಬವರು ಅತಿ ಹೆಚ್ಚು ಟಿಕೆಟ್ ಬುಕ್ಕಿಂಗ್ ಮಾಡಿದ್ದು, 2007ರಿಂದ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದು, 2015ರಿಂದ ಪ್ರಯಾಣಿಸಿದ ಟಿಕೆಟ್ ಶೇಖರಿಸಿ ಸಭೆಯಲ್ಲಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.

ಟಿಕೆಟ್ ವಿಲೀನಗೊಳಿಸಿ: ಈ ಸಂದರ್ಭದಲ್ಲಿ ಮಾತನಾಡಿದ ಅತಿಹೆಚ್ಚು ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕ ಸಗೀನ್, ನಾನೂ ಈ ಹಿಂದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಆದರೆ, ಈಗ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಾತ್ರ ಪ್ರಯಾಣಿಸುತ್ತೇನೆ.
ಕೆಎಸ್ಸಾರ್ಟಿಸಿ ಪ್ರಯಾಣ ಕಡಿಮೆ ವೆಚ್ಚ, ಸುರಕ್ಷತೆ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ಒದಗಿಸುತ್ತದೆ. ಟಿಕೆಟುಗಳು ಸಮಯದಲ್ಲಿ ದೊರೆಯದೆ ಇದ್ದರೆ ಮಾತ್ರ ಇತರೆ ಬಸ್ಸುಗಳಲ್ಲಿ ಪ್ರಯಾಣಿಸುವೆ. ಬಸ್ಸುಗಳಿಗೆ ಜಿಪಿಎಸ್ ಮತ್ತು ಆನ್‌ಲೈನ್ ಟ್ರಾಕಿಂಗ್‌ನ್ನು ಒದಗಿಸಬೇಕು ಎಂದು ಅವರು ಸಲಹೆ ನೀಡಿದರು.

ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ಸಭ್ಯತೆಯಿಂದ ವರ್ತಿಸುತ್ತಾರೆ. ಕೌಂಟರ್ ಟಿಕೆಟ್‌ಅನ್ನು ಇ-ಟಿಕೆಟ್‌ನೊಂದಿಗೆ ವಿಲೀನಗೊಳಿಸಬೇಕು. ಇದರಿಂದ ಹಾರ್ಡ್ ಕಾಪಿ ಇಲ್ಲದೆ ಪ್ರಯಾಣಿಸಲು ಸುಲಭವಾಗುತ್ತದೆ. ಕೆಲವೊಂದು ಸ್ಥಳಗಳ ಮಾರ್ಗಗಳ ಮತ್ತು ಸಮಯ ಬದಲಾವಣೆಗೆ ಕೋರಿರುತ್ತಾರೆ ಎಂದು ಸಗೀನ್ ನುಡಿದರು.

ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ನಿರಂತರ ಪ್ರಯಾಣಿಸಿದ ಪ್ರಯಾಣಿಕರ ಸಭೆ ಅಧ್ಯಕ್ಷತೆಯನ್ನು ಕೆಎಸ್ಸಾರ್ಟಿಸಿ ನಿರ್ದೇಶಕ(ಭದ್ರತಾ ಮತ್ತು ಜಾಗೃತಾ) ಡಾ.ರಾಮ್ ನಿವಾಸ್ ಸಪೆಟ್ ವಹಿಸಿದ್ದು, ಹಿರಿಯ ಅಧಿಕಾರಿಗಳಾದ ಪ್ರಭಾಕರ್ ರೆಡ್ಡಿ, ಡಾ.ಕೆ. ರಾಮಮೂತಿರ್, ಎನ್.ಕೆ.ಬಸವರಾಜು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News