ಶಿವಮೊಗ್ಗ: ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ

Update: 2020-02-29 12:37 GMT

ಶಿವಮೊಗ್ಗ: ಪ್ರಚೋದನಕಾರಿ ಹೇಳಿಕೆ ನೀಡಿ ದೇಶದಲ್ಲಿ ಕೋಮು ಸೌಹಾರ್ದತೆ ಕದಡುತ್ತಿರುವವರ ಮತ್ತು ಹೋರಾಟಗಾರರು ಹಾಗೂ ರಾಷ್ಟ್ರಪಿತ ಮಹಾತ್ಮಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಟಿಜನ್ ಯುನಿಟೆಡ್ ಮೂವ್ಮೆಂಟ್ ಶಿವಮೊಗ್ಗ ಘಟಕ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರಚೋದನಕಾರಿ ಹೇಳಿಕೆ ನೀಡಿ ದೆಹಲಿಯಲ್ಲಿ ಗಲಬೆ ನಡೆಯಲು ಕಾರಣಕರ್ತರಾಗಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರ ಹಾಗೂ ಆತನ ಸಂಗಡಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು, ಘಟನೆಯನ್ನು ತನಿಖೆಗೆ ಒಳಪಡಿಸಬೇಕು, ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿರುವ ಕೇಂದ್ರ ಗೃಹಮಂತ್ರಿ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.

ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಅಮಾಯಕರ ಹತ್ಯೆ ಹಾಗೂ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರ ಮೇಲೆ ಸಂಘ ಪರಿವಾರದವರು ಹಾಗೂ ಬಿಜೆಪಿಯ ಕೆಲ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿ, ಆ ಮೂಲಕ ಸಾರ್ವಜನಿಕರನ್ನು ಉದ್ರೇಕಿಸಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಘಟನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ ಓರ್ವ ಪೊಲೀಸ್ ಸಿಬಂದಿ ಮೃತಪಟ್ಟಿದ್ದಾರೆ. ಸಾಕಷ್ಟು ಅಂಗಡಿಗಳು, ಮನೆಗಳು ಮತ್ತು ವಾಹನಗಳನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಇದರಿಂದಾಗಿ ಕೊಟ್ಯಂತರ ರೂಪಾಯಿಗಳ ನಷ್ಟ ಹಾಗೂ ಶಾಂತಿಯುತವಾಗಿದ್ದ ದೆಹಲಿಯಲ್ಲಿ ಗುಜರಾತ್‌ನಲ್ಲಿ ನಡೆದಂತಹ ನರಮೇಧ ನಡೆದಿದೆ. ದೆಹಲಿ ಹೊತ್ತಿ ಉರಿದ ಕ್ಕೆ ಬಿಜೆಪಿ ನಾಯಕರ ಹೇಳಿಕೆಗಳು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಪೂರ್ವ ನೀಯೋಜಿತ ಕೃತ್ಯ ನಡೆಸಲಾಗಿದೆ. ಗಲಭೆಯ ಸಂದಂಭದಲ್ಲಿ ಪೊಲೀಸ್ ಸಿಬ್ಬಂದಿಯು ಮೂಖ ಪ್ರೇಕ್ಷಕರಾಗಿದ್ದಾರೆ. ಆ ಸಂದಂಭದಲ್ಲಿ ಗಲಭೆಕೊರರನ್ನು ತಡೆಯಲು ಪ್ರಯತ್ನಿಸಿದ್ದರೆ ಇಂತಹ ದೊಡ್ಡ ಅನಾಹುತ ಆಗುತ್ತಿರಲ್ಲಿಲ್ಲ ಎಂದರು.

ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬೆದರಿಕೆ ಹಾಕಿ ಅಮೆರಿಕಾದ ಅಧ್ಯಕ್ಷ ಟ್ರಂಪ್ ಹೋಗುವರೆಗೂ ಕಾಣುತ್ತೇವೆ. ನಂತರ ನಾವು ಯಾರ ಮಾತು ಕೇಳದೆ ನಾವೇ ಪ್ರತಿಭಟನಾಕಾರರನ್ನು ತೆರವುಗೊಳಿಸುತ್ತೇವೆ ಎಂದು ಹೇಳಿ ಪ್ರಚೋದಿಸಿದ್ದರೂ  ಅವರ ಮೇಲೆ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಇತ್ತೀಚೆಗೆ ಬಿಜೆಪಿ ಮುಖಂಡರಾದ ಬಸವನಗೌಡ ಪಾಟೀಲ್ ಯತ್ನಾಳ್‌ರವರು ಹಿರಿಯ ಸ್ವತಂತ್ರ ಹೋರಾಟಗಾರರಾದ ದೊರೆಸ್ವಾಮಿರವರ ವಿರುದ್ಧ ನೀಡಿದಂತಹ ಹೇಳಿಕೆ ಹಾಗೂ ಸಂಸದ ಅನಂತಕುಮಾರ ಹೆಗಡೆರವರ ಮಹಾತ್ಮ ಗಾಂಧಿಜೀಯವರ ವಿರುದ್ಧದ ಹೇಳಿಕೆ ಹಾಗೂ ಕೇಂದ್ರ ಸರ್ಕಾರದ ನಡೆ ದೇಶದಲ್ಲಿ ಉದ್ರಿಕ್ತವಾದ ವಾತವರಣ ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿದರು.

ದೇಶದ ನಾಗರಿಕರ ದಿಕ್ಕನ್ನು ತಪ್ಪಿಸಲು ಸಿಎಎ, ಎನ್.ಆರ್.ಸಿ, ಎನ್‌ಪಿಆರ್ ಅಂತಹ ಕರಾಳ ಕಾನೂನು ಜಾರಿಗೊಳಿಸಲಾಗಿದೆ. ಸದರಿ ಕಾನೂನನ್ನು ಹಿಂಪಡೆಯುವವರೆಗೂ ಸಹ ನಮ್ಮಹೋರಾಟವನ್ನು ಮುಂದುವರೆಯುತ್ತದೆ ಎಂದು ಹೇಳಿದರು.

ತಕ್ಷಣವೇ ದೆಹಲಿ ಗಲಭೆಕೋರರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ ಸಾವು-ನೋವು ಅನುಭವಿಸಿರುವ ಹಾಗೂ ಮನೆಗಳನ್ನು, ಅಂಗಡಿಗಳನ್ನು, ವಾಹನಗಳನ್ನು ಕಳೆದುಕೊಂಡಿರುವವರಿಗೆ ಸೂಕ್ತ ಪರಿಹಾರ ನೀಡಬೇಕು. ಸಿಎಎ ಮತ್ತು ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಷಹರಾಜ್ ಮುಜಾಹಿದ್ ಸಿದ್ದಕಿ, ಜಫ್ರುಲ್ಲಾ ಸತ್ತಾರ್ ಖಾನ್, ನಿಸಾರ್ ಅಹಮದ್, ಐ ಜಾವಿದ್ ಬೇಗ್, ತೌಸಿಫ್ ಅಹಮದ್, ಸೈಯದ್ ಸೈಫುಲ್ಲಾ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News