ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿಳಂಬ: ಡಿಕೆಶಿ ನಿವಾಸಕ್ಕೆ ಗುಲಾಂ ನಬಿ ಆಝಾದ್ ಭೇಟಿ

Update: 2020-02-29 12:53 GMT

ಬೆಂಗಳೂರು, ಫೆ.29: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಧೋರಣೆಯಿಂದ ಬೇಸತ್ತಿರುವ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಶನಿವಾರ ಬೆಂಗಳೂರಿಗೆ ಆಗಮಿಸಿದ್ದಾರೆ.

ಸದಾಶಿವನಗರದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಗುಲಾಂ ನಬಿ ಆಝಾದ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ಶಿವಕುಮಾರ್ ಜೊತೆ ಸುಮಾರು 20 ನಿಮಿಷಗಳ ಕಾಲ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು.

ದಿಲ್ಲಿ ವಿಧಾನಸಭೆಯ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ಗೆ ನೂತನ ಸಾರಥಿಯ ನೇಮಕ ನಿಶ್ಚಿತ ಎಂದು ಹೇಳಲಾಗುತ್ತಿತ್ತು. ಆದರೆ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಹಾಗೂ ಕೆ.ಎಚ್.ಮುನಿಯಪ್ಪ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಲುಕಿಕೊಂಡಿದೆ ಎನ್ನಲಾಗಿದೆ.

ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದ್ದರಿಂದ, ನೈತಿಕ ಹೊಣೆಹೊತ್ತು ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದ್ದು, ರಾಜ್ಯ ನಾಯಕರಲ್ಲಿ ಈ ಬಗ್ಗೆ ಒಮ್ಮತ ಮೂಡಿಸಲು ಸಾಧ್ಯವಾಗಿರಲಿಲ್ಲ. ಆದುದರಿಂದ, ಪ್ರತ್ಯೇಕವಾಗಿ ನಾಯಕರ ಜೊತೆ ಚರ್ಚೆ ನಡೆಸಲು ಹೈಕಮಾಂಡ್ ಗುಲಾಂ ನಬಿ ಆಝಾ್ರನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ.

ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ನಡೆಸಿರುವ ಗುಲಾಂ ನಬಿ ಆಝಾದ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಹಿರಿಯ ನಾಯಕರ ಜೊತೆಯೂ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News