ಪಾಪ್ಯುಲರ್ ಫ್ರಂಟ್ ನೂತನ ರಾಜ್ಯಾಧ್ಯಕ್ಷರಾಗಿ ಯಾಸಿರ್ ಹಸನ್ ಆಯ್ಕೆ

Update: 2020-02-29 13:41 GMT
ಯಾಸಿರ್ ಹಸನ್, ನಾಸಿರ್ ಪಾಶ

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ) ಕರ್ನಾಟಕದ ಮೂರು ದಿನಗಳ ರಾಜ್ಯ ಪ್ರತಿನಿಧಿ ಸಭೆಯು ಫೆಬ್ರವರಿ 27-29, 2020ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯಿತು. ಈ ವೇಳೆ 2020-2022ರ ಅವಧಿಗೆ ಸಂಘಟನೆಯ ನೂತನ ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನೂತನ ರಾಜ್ಯಾಧ್ಯಕ್ಷರಾಗಿ ಯಾಸಿರ್ ಹಸನ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಪಾಶ ಬೆಂಗಳೂರು ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರ ವಿವರ:

ಅಯ್ಯೂಬ್ ಅಗ್ನಾಡಿ(ಉಪಾಧ್ಯಕ್ಷರು), ಮುಹಮ್ಮದ್ ಶರೀಫ್ ಬಜ್ಪೆ (ಕಾರ್ಯದರ್ಶಿ), ಶಾಹೀದ್ ನಸೀರ್ ಗುಲ್ಬರ್ಗಾ(ಕೋಶಾಧಿಕಾರಿ) ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್, ಅಬ್ದುಲ್ ಮಜೀದ್, ಶರೀಫ್ ಕೊಡಾಜೆ, ಮುಹಮ್ಮದ್ ತಫ್ಸೀರ್ ಆಯ್ಕೆಯಾದರು.

ಮೂರು ದಿನಗಳ ಕಾಲ ನಡೆದ ರಾಜ್ಯ ಪ್ರತಿನಿಧಿ ಸಭೆಯು ಫೆ.27ರಂದು ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್ ಅವರು ಧ್ವಜಾರೋಹನಗೈಯ್ಯುವ ಮೂಲಕ ಚಾಲನೆಗೊಂಡಿತು. ಈ ಸಭೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಸಂಘಟನೆ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಳೆದ ವರ್ಷದ ಕಾರ್ಯಚಟುವಟಿಕೆಗಳ ಕುರಿತು ಅವಲೋಕನ ನಡೆಸಲಾಯಿತು ಮತ್ತು ಮುಂಬರುವ ವರ್ಷಗಳಿಗೆ ಕಾರ್ಯಯೋಜನೆಯನ್ನು ರೂಪಿಸಲಾಯಿತು.

ನಂತರ ಅಧ್ಯಕ್ಷೀಯ ಭಾಷಣ ಮಾಡಿದ ಯಾಸಿರ್ ಹಸನ್ ಅವರು, ದೇಶದಲ್ಲಿ ಪ್ರಸಕ್ತ ನಡೆಯುತ್ತಿರುವ ಸನ್ನಿವೇಶಗಳ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು 30 ವರ್ಷಗಳಿಂದ ಎಚ್ಚರಿಸುತ್ತಾ ಬಂದಿದೆ. ಇದೀಗ ಹಿಂದುತ್ವ ಫ್ಯಾಶಿಸಂ ಬೃಹದಾಕಾರವಾಗಿ ಬೆಳೆದು ನಿಂತಿದೆ. ಎನ್‌ಆರ್‌ಸಿ, ಸಿಎಎಯಂತಹ ಪೌರತ್ವ ಕಾಯ್ದೆಗಳ ಮೂಲಕ ಅವರು ಇದೀಗ ನಮ್ಮ ಅಸ್ತಿತ್ವವನ್ನು ಪ್ರಶ್ನಿಸುತ್ತಿದ್ದಾರೆ. ಈ ಮಧ್ಯೆ ದಿಲ್ಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಆತಂಕಕಾರಿಯಾಗಿವೆ. ಹಿಂದುತ್ವ ಫ್ಯಾಶಿಸಂನ ಸವಾಲುಗಳನ್ನು ದಿಟ್ಟವಾಗಿ ಎದುರಿಸುತ್ತಾ ನಾವು ಮುಂದೆ ಸಾಗಬೇಕಾಗಿದೆ. ಮಾತ್ರವಲ್ಲ ಸಂಘಟನೆಯು ದೇಶದ ಮುಂದಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ನಡೆಯುವ ಆಂದೋಲನಗಳಲ್ಲಿ ಯಾವತ್ತೂ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ಹೇಳಿದರು.

ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ನಂತರ ಸಭೆಯು ವರದಿಯ ಕುರಿತು ಚರ್ಚೆ ನಡೆಸಿತು ಮತ್ತು ಕಾರ್ಯಚಟುವಟಿಕೆಗಳ ಕುರಿತು ಅವಲೋಕನ ನಡೆಸಿತು.

ಚುನಾವಣಾ ಪ್ರಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಅಫ್ಸರ್ ಪಾಶ ನೆರವೇರಿಸಿಕೊಟ್ಟರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News