ದೇವೇಗೌಡರ ಮನೆ ಆದೇಶ ಪಾಲಿಸುವ ದೊರೆಸ್ವಾಮಿ: ಶಾಸಕ ರೇಣುಕಾಚಾರ್ಯ

Update: 2020-02-29 13:22 GMT

ದಾವಣಗೆರೆ, ಫೆ.29: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮನೆಯಿಂದ ಬರುವ ಆದೇಶವನ್ನು ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪಾಲನೆ ಮಾಡುತ್ತಾರೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊರೆಸ್ವಾಮಿ ಅವರು ಒಂದು ಪಕ್ಷದವರಂತೆ ಮಾತನಾಡುವುದನ್ನು ಬಿಡಬೇಕು. ಅಲ್ಲದೆ, ಅವರ ಹೋರಾಟಗಳು ಕೆಲವರ ಆದೇಶಗಳಂತೆ ನಡೆಯುತ್ತದೆ ಎಂದು ದೂರಿದರು.

ಮಾ.2ರಿಂದ ನಡೆಯುವ ಅಧಿವೇಶನಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹೇಳಿವೆ. ಆದರೆ, ಇದು ಪಕ್ಷದ ಅಧಿವೇಶನ ಅಲ್ಲ. ಇದನ್ನು ವಿರೋಧಿಸಿದರೆ ಆರೂವರೆ ಕೋಟಿ ಜನರಿಗೆ ಮಾಡಿದ ಅಪಮಾನ. ರೈತರ, ಜನರ ಕಷ್ಟಗಳ ಬಗ್ಗೆ ಚರ್ಚೆಯಾಗಬೇಕು. ಅದನ್ನು ಬಿಟ್ಟು ವಿಪಕ್ಷಗಳು ಗದ್ದಲ ಎಬ್ಬಿಸಿದರೆ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ನಿಲ್ಲುತ್ತೇವೆ ಎಂದರು.

ಎಚ್.ಎಸ್.ದೊರೆಸ್ವಾಮಿ ಅವರು ಹಿರಿಯರು, ಅವರ ಬಗ್ಗೆ ಗೌರವವಿದೆ, ಅವರು ಮಾರ್ಗದರ್ಶನ ಮಾಡಬೇಕೆ ಹೊರತು, ಪ್ರಗತಿಪರ ಹೆಸರಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವವರ ಪರ ಮಾತನಾಡಿದರೆ ಸಿಟ್ಟು ಬರುತ್ತದೆ. ಭಾರತ ಮಾತೆಗೆ ಅವಮಾನವಾದಾಗ ಖಂಡಿಸಬೇಕಿತ್ತು. ಆದರೆ, ದೊರೆಸ್ವಾಮಿ ಅವರು ಈ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

‘ಯು.ಟಿ.ಖಾದರ್ ಮೂರ್ಖ’
ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಹೋಗಿದ್ದು ಬಿರಿಯಾನಿ ತಿನ್ನಲು ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಯು.ಟಿ.ಖಾದರ್ ಮೂರ್ಖ. ಆತನಿಗೆ ಜ್ಞಾನವೇ ಇಲ್ಲ ಎಂದು ರೇಣುಕಾಚಾರ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News