ಆಡಬಾರದ್ದನ್ನು ಆಡಿದರೆ ಕೇಳಬಾರದ್ದನ್ನು ಕೇಳಬೇಕಾಗುತ್ತೆ: ಯತ್ನಾಳ್ ಹೇಳಿಕೆ ಬಗ್ಗೆ ಸಚಿವ ಸುರೇಶ್ ಕುಮಾರ್

Update: 2020-02-29 14:35 GMT

ಮಡಿಕೇರಿ, ಫೆ.29: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿರುವ ಹೇಳಿಕೆ ಸರಿಯಿಲ್ಲ, ಹಾಗೆಯೇ ದೊರೆಸ್ವಾಮಿ ಅವರು ಪ್ರಧಾನಿಗಳ ಬಗ್ಗೆ ಲಘುವಾಗಿ ಮಾತನಾಡಬಾರದಿತ್ತು. ಹೀಗೆ ಆಡಬಾರದ್ದನ್ನು ಆಡಿದರೆ ಕೇಳಬಾರದ್ದನ್ನು ಕೇಳಬೇಕಾಗುತ್ತೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ನಾಪೋಕ್ಲು ಕೊಡವ ಸಮಾಜದಲ್ಲಿ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದೊರೆಸ್ವಾಮಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ, ಅವರು ದೊಡ್ಡವರು, ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಆದರೆ ಅವರು ಪ್ರಧಾನಿಮಂತ್ರಿಗಳ ಬಗ್ಗೆ ಲಘುವಾಗಿ ಮಾತನಾಡಬಾರದಿತ್ತು. ಹೇಳಿಕೆ ನೀಡುವಾಗ ಬಹಳ ಎಚ್ಚರಿಕೆಯಿಂದಿರಬೇಕು, ಹೀಗೆ ಆಡಬಾರದ್ದನ್ನು ಆಡಿದರೆ ಕೇಳಬಾರದ್ದನ್ನು ಕೇಳಬೇಕಾಗುತ್ತೆ ತಿಳಿಸಿದರು.

'ಎಲ್ಲಾ ಶಾಲೆಗಳಲ್ಲಿ ಕನ್ನಡ ಕಡ್ಡಾಯ'

ಕುಶಾಲನಗರದ ಟಿಬೆಟಿಯನ್ ಕ್ಯಾಂಪ್ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ತೆಗೆದು ಮಾತೃಭಾಷೆ ಕಲಿಕೆಗೆ ಅವಕಾಶ ಕಲ್ಪಿಸುವಂತೆ ಟಿಬೆಟಿಯನ್ನರು ಮನವಿ ಮಾಡಿದ್ದಾರೆ. ಆದರೆ ಒಂದನೇ ತರಗತಿಯಿಂದ ಮಾತೃಭಾಷೆ ಕನ್ನಡ ಕಲಿಕೆ ಕಡ್ಡಾಯವಾಗಿದೆ ಎಂದು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಕನ್ನಡವನ್ನು ಎಲ್ಲಾ ಶಾಲೆಗಳಲ್ಲಿ ಕಲಿಸಬೇಕೆಂಬ ಕಾನೂನು ಇದೆ. ಆ ನಿಯಮವನ್ನು ನೀವು ಕೂಡ ಪಾಲಿಸಬೇಕು ಎಂದು ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News