ಹೇಡಿ ಸಾವರ್ಕರ್ ಜತೆ ನನ್ನ ಹೋಲಿಕೆ ಸಲ್ಲ: ಎಚ್.ಎಸ್.ದೊರೆಸ್ವಾಮಿ
ಬೆಂಗಳೂರು, ಫೆ.29: ಸ್ವಾತಂತ್ರ ಚಳವಳಿಯಲ್ಲಿ ಪಾಲ್ಗೊಂಡು ತಪ್ಪು ಮಾಡಿದೆ ಎಂದು ಹೇಡಿಯಂತೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಸಾವರ್ಕರ್ ಜತೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ.
ನಗರದ ಶಾಸಕರ ಭವನದಲ್ಲಿ ದಿವ್ಯಚಂದನ ಪ್ರಕಾಶನ ಹೊರ ತಂದಿರುವ ಎನ್.ಪದ್ಮನಾಭರಾವ್ ಅವರ ‘ಸ್ವಾತಂತ್ರ್ಯ ಹೋರಾಟದ ಕರ್ನಾಟಕದ ಕಣ್ಮಣಿಗಳು’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಆರೆಸ್ಸೆಸ್‌ನ ಸ್ಥಾಪಕ ಮುಖಂಡ ಸಾವರ್ಕರ್ ಖಡ್ಗ ಮತ್ತು ಬಂದೂಕುಗಳನ್ನು ಹಿಡಿದು ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಅನಂತರ ಬ್ರಿಟಿಷರು ಆತನನ್ನು ಬಂಧಿಸಿದ್ದ ಸಂದರ್ಭದಲ್ಲಿ ನಾನು ಈ ಹೋರಾಟದಲ್ಲಿ ಪಾಲ್ಗೊಂಡು ತಪ್ಪು ಮಾಡಿದೆ ಎಂದು ಹೇಡಿಯಂತೆ ಪತ್ರ ಬರೆದುಕೊಟ್ಟರು. ಅವರು ಯಾಕೆ ಹಾಗೆ ಮಾಡಿದರು ಎಂಬ ಪ್ರಶ್ನೆಯಿದೆ. ಹೀಗಾಗಿ, ಅವರೊಂದಿಗೆ ನನ್ನ ಹೋಲಿಕೆ ಸಲ್ಲ ಎಂದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಗಾಂಧಿ, ನೆಹರು, ಭಗತ್‌ಸಿಂಗ್, ಲಾಲಾ ಲಜಪತ್ ರಾಯ್, ತಿಲಕ್, ಸುಭಾಷ್ ಚಂದ್ರಬೋಸ್ ಹೀಗೆ ಅನೇಕರು ತಮ್ಮ ಜೀವನವನ್ನು ಮುಡಿಪಾಗಿಟ್ಟು ಹೋರಾಟ ನಡೆಸಿದ್ದಾರೆ. ಅವರಿಗೆ ಮತ್ತೊಬ್ಬರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ನುಡಿದರು.
ಸ್ವಾತಂತ್ರ್ಯ ಹೋರಾಟದ ಕುರಿತು ಕನಿಷ್ಠ ಜ್ಞಾನವಿಲ್ಲದವರೆಲ್ಲರೂ, ಆ ಚಳವಳಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇಂದು ನನ್ನನ್ನು ನಕಲಿ ಹೋರಾಟಗಾರ ಎಂದು ಹೇಳುತ್ತಾರೆ. ಅದಕ್ಕೆ ಸಾಕ್ಷ್ಯ ಬೇಕು. ಯಾವುದೇ ಪುರಾವೆ ಇಲ್ಲದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂಧಕಾರದಲ್ಲಿ ಮುಳುಗಿ ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಹಾತ್ಮಗಾಂಧೀಜಿಯ ಭಾಷಣಗಳು ದೇಶದಲ್ಲಿ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿವೆ. ಅದರಲ್ಲಿ ನಾನೂ ಸೇರಿದಂತೆ ಸಾವಿರಾರು ಜನರು ಇದ್ದೇವೆ. ರಾಷ್ಟ್ರದ ಪ್ರತಿಯೊಬ್ಬ ಹೋರಾಟಗಾರರಿಗೂ ಅವರದ್ದೇ ಆದ ಸ್ಥಾನವಿರುತ್ತದೆ. ಸ್ವಾತಂತ್ರ ಹೋರಾಟದಲ್ಲಿ ನನ್ನದೂ ಅಳಿಲು ಸೇವೆಯಿದೆ. ಹಾಗಂತ ಇತರರೊಂದಿಗೆ ಹೋಲಿಕೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ದೇಶಕ್ಕೆ ಸ್ವಾಂತಂತ್ರ ತಂದುಕೊಡಲು ಸಾವಿರಾರು ಜನ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಂತಹವರಿಗೆ ಅಗೌರವ ತೋರಿದಲ್ಲಿ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶಕರ ಕೊರತೆಯಾಗಲಿದೆ. ಅಧಿಕಾರ, ಜಾತಿ ಪ್ರಭಾವದಿಂದಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದು, ಅವರಿಗೆ ಜನರೇ ಬುದ್ಧಿ ಕಲಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಪುಸ್ತಕದ ಲೇಖಕ ಎನ್.ಪದ್ಮನಾಭರಾವ್, ದಿವ್ಯಚಂದನ ಪ್ರಕಾಶಕ ರಂಗಾಚಾರಿ ಸೇರಿದಂತೆ ಹಲವರಿದ್ದರು.
'ಆ ಗೌರವ ಎಲ್ಲಿಂದ ಬಂತು?'
ಸಮಾಜದಲ್ಲಿ ಶ್ರೀಮಂತಿಕೆ ಮತ್ತು ಅಧಿಕಾರ ಇದ್ದಲ್ಲಿ ಎಲ್ಲ ರೀತಿಯ ಗೌರವಗಳು ಲಭ್ಯವಾಗುತ್ತವೆ. ಆದರೆ, ಆ ಗೌರವ ಎಲ್ಲಿಂದ ಬಂತು ಎಂಬುದನ್ನು ಯಾರೂ ಕೇಳುತ್ತಿಲ್ಲ. ಅಲ್ಲದೆ, ಜೈಲಿಗೆ ಹೋಗಿ ಬಂದವರನ್ನು ಸನ್ಮಾನ ಮಾಡುತ್ತಿದ್ದಾರೆ. ಮೌಲ್ಯಗಳ ಕುಸಿತದಿಂದಾಗಿ ಈ ರೀತಿಯ ವ್ಯವಸ್ಥೆ ನಿರ್ಮಾಣವಾಗಿದೆ. ಪಠ್ಯದಲ್ಲಿ ವೌಲ್ಯಗಳನ್ನು ಅಳವಡಿಸಬೇಕಾದ ಅಗತ್ಯವಿದೆ.
-ನ್ಯಾ. ಎನ್.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ