ನಮ್ಮ ಪಕ್ಷದ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ...: ಎಚ್.ಡಿ. ದೇವೇಗೌಡ ಗುಡುಗು

Update: 2020-02-29 15:20 GMT

ಮಂಡ್ಯ, ಫೆ.29: ಯಾವ ಸಿಎಂ, ಮಂತ್ರಿ ಬಗ್ಗೆಯೂ ಕೆಟ್ಟದ್ದಾಗಿ ಮಾತಾಡಲ್ಲ. ಆದರೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಾನು ಸಿಡಿದೋಳೋದು ಸತ್ಯ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.

ಕೆ.ಆರ್.ಪೇಟೆ ತಾಲೂಕು ಹರಳಹಳ್ಳಿ ಬಳಿ ಜೆಡಿಎಸ್ ಮುಖಂಡ, ಜಿಪಂ ಸದಸ್ಯ ಎಚ್.ಟಿ.ಮಂಜು ಮಾಲಕತ್ವದ ಟಿ.ಜೆ.ಕ್ರಷರ್ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಒಬ್ಬೊಬ್ಬ ಕಾರ್ಯಕರ್ತನೂ ಜೆಡಿಎಸ್ ಪಕ್ಷದ ಶಕ್ತಿ. ಇವರನ್ನು ಉಳಿಸಿಕೊಳ್ಳುವ ಸಲುವಾಗಿ ಸಾಕಷ್ಟು ಹೋರಾಟ ಮಾಡಿದ್ದೇನೆ. ನೀವು ಇನ್ನೂ ಮೂರೂವರೆ ವರ್ಷ ಅಧಿಕಾರ ನಡೆಸಿ. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಸಿಡಿದೇಳೋದು ಸತ್ಯ ಎಂದು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದರು.

ಈ ಬಗ್ಗೆ ಸಿಎಂಗೂ ಸ್ವತಃ ದೂರವಾಣಿ ಮಾಡಿದ್ದೇನೆ ಎಂದು ಅವರು ಹೇಳಿದರು. ಕೋರ್ಟ್ ಆದೇಶಕ್ಕೆ ತಕ್ಕಂತೆ ಸಿಎಂ ನಡೆದುಕೊಂಡರೆ ಅವರನ್ನು ಗೌರವದಿಂದ ಕಾಣುತ್ತೇವೆ. ನಮ್ಮ ಪಕ್ಷ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತದೆ. ಕೋರ್ಟ್ ಆದೇಶ ಧಿಕ್ಕರಿಸುವ ಸರಕಾರವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗಣಿ ಮಾಲಕರ ಪರವಾಗಿ ಕೋರ್ಟ್ ಆದೇಶ ನೀಡಿದ್ದರೂ ಗಣಿಗಾರಿಕೆ ನಿರ್ಬಂಧಿಸಲಾಗಿದೆ. ಈ ಹಿಂದಿನ ಅಧಿಕಾರಿಗಳು ಕಾನೂನು ಪ್ರಕಾರ ಪರಿಶೀಲನೆ ಮಾಡಿ ಅನುಮತಿ ಕೊಟ್ಟಿದ್ದರು. ಅಧಿಕಾರಿಗಳು ಕೊಟ್ಟ ಅನುಮತಿಯಂತೆ  ಕ್ರಷರ್ ಶುರು ಮಾಡಿದ್ದಾರೆ. ಈ ಬಗ್ಗೆ ಸಿಎಂ ಅವರಿಗೂ ದೂರವಾಣಿ ಮಾಡಿದ್ದೇನೆ ಎಂದು ಅವರು ಹೇಳಿದರು. 

ಸಚಿವ ನಾರಾಯಣಗೌಡ ರಾಜಕೀಯ ದ್ವೇಷಕ್ಕೆ ಈ ರೀತಿ ಮಾಡುತ್ತಿದ್ದಾರೆ. ಅಧಿಕಾರದ ಶಕ್ತಿ ಪ್ರಯೋಗ ಮಾಡಿ ಡಿಸಿ ತಾನು ಹೇಳಿದಂತೆ ಕೇಳುವಂತೆ ಮಾಡುತ್ತಿದ್ದಾರೆ. ಸಚಿವರು ಹೇಳದೆ ಡಿಸಿ ಒಂದು ಹೆಜ್ಜೆ ಮುಂದೆ ಹೋಗುವುದಿಲ್ಲ ಎಂದು ಅವರು ಆರೋಪಿಸಿದರು.

2016ರಲ್ಲಿ ಗಣಿ ಪರವಾನಗಿ ನೀಡುವಂತೆ ಗಣಿ ಸಚಿವರಿಗೆ ಪತ್ರ ಬರೆದಿದ್ದ ನಾರಾಯಣಗೌಡ, ಈಗ ಜೆಸಿಎಸ್ ತೊರೆದು ಬಿಜೆಪಿ ಸೇರಿದ ಬಳಿಕ ಗಣಿ ಪರವಾನಗಿ ನೀಡದಂತೆ ಪತ್ರ ಬರೆದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಯಾರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬುದರ ಬಗ್ಗೆ ಪಟ್ಟಿಮಾಡಿ ನನಗೆ ಕೊಡಿ. ಮುಂದೊಂದು ದಿನ ಕೆ.ಆರ್.ಪೇಟೆಯಲ್ಲೇ ದೊಡ್ಡ ಹೋರಾಟ ಮಾಡೋಣ ಎಂದು ಪಕ್ಷದ ಕಾರ್ಯಕರ್ತರಿಗೆ ದೇವೇಗೌಡರು ಸಲಹೆ ನೀಡಿದರು.

ಶಾಸಕರಾದ ಡಾ.ಕೆ.ಅನ್ನದಾನಿ, ಕೆ.ಸುರೇಶ್‍ಗೌಡ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಹಾಗೂ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News