ಕೊಳ್ಳೇಗಾಲ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು
Update: 2020-02-29 21:16 IST
ಚಾಮರಾಜನಗರ: ವಿದ್ಯುತ್ ಗುತ್ತಿಗೆದಾರನ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿಯಾದ ಮಹಮ್ಮದ್ ತಸ್ಮಿನ್ ಎಂಬವರ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ ಸುಮಾರು 160 ಗ್ರಾಂ ಚಿನ್ನಾಭರಣ, 50 ಸಾವಿರ ನಗದು, ಬೆಲೆಬಾಳುವ 6 ರಾಡೋ ವಾಚ್‌ಗಳು, ಕೆನಾನ್ ಕ್ಯಾಮರಾ ಎಗರಿಸಿಕೊಂಡು ಪರಾರಿಯಾಗಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದು, ಕಳೆದ 4 ದಿನಗಳಿಂದ ಸಿಸಿಟಿವಿ ಕೆಟ್ಟಿತ್ತು ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.