ಭೇದ-ಭಾವವಿಲ್ಲದೇ ದುಡಿಯುವವರು ನೈಜ ದೇಶಭಕ್ತರು: ವಜೂಭಾಯಿ ವಾಲಾ

Update: 2020-02-29 17:29 GMT

ಬೆಂಗಳೂರು, ಫೆ. 29: ಜಾತಿ, ಧರ್ಮ ಎಂಬ ಭೇದ-ಭಾವವಿಲ್ಲದೆ ಸಮಾಜಕ್ಕಾಗಿ ದುಡಿಯುವವರೇ ನಿಜವಾದ ದೇಶಭಕ್ತರಾಗುತ್ತಾರೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಹೇಳಿದ್ದಾರೆ.

ಶನಿವಾರ ನಗದ ಗಾಜಿನ ಮನೆಯಲ್ಲಿಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ವಿವಿಧ ಪುರಸ್ಕಾರ ಪ್ರಮಾಣ ಪತ್ರಗಳನ್ನು ವಿತರಿಸಿದ ಬಳಿಕ ಮಾತನಾಡಿದ ಅವರು, ಸಮಾಜ ಸೇವಕರು ಎಲ್ಲರೂ ಒಂದೇ ಭಾವದಿಂದ ಕಾಣಬೇಕು. ಯಾವುದೇ ತಾರತಮ್ಯ, ಭೇದ-ಭಾವವಿಲ್ಲದೇ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

ದೇಶ ಶಕ್ತಿಶಾಲಿಯಾಗಲು ಒಗ್ಗಟ್ಟು ಮುಖ್ಯ. ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಲು ಸಾಧ್ಯ. ಹೀಗಾಗಿ, ಎಲ್ಲರೂ ದೇಶ ಕಟ್ಟುವ ಕೆಲಸ ಮಾಡಬೇಕು, ದೇಶವನ್ನು ಒಡೆಯುವ ಕೆಲಸಕ್ಕೆ ಮುಂದಾಗಬಾರದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಲಿಷ್ಠವಾದ ದೇಶ ನಿರ್ಮಾಣಕ್ಕೆ ಮುಂದಾಗಲಿ ಎಂದರು.

ವಿವೇಕಾನಂದರ ತತ್ವ, ಸಿದ್ಧಾಂತ, ಬದುಕನ್ನು ಅನುಸರಿಸಿದರೆ, ನಿಜವಾಗಲೂ ಒಳ್ಳೆ ಹಾಗೂ ಶಕ್ತಿಶಾಲಿ ದೇಶನಿರ್ಮಾಣ ಸಾಧ್ಯವಾಗುತ್ತದೆ. ಯುವ ಜನರನ್ನು ಜವಾಬ್ದಾರಿ ಯುತ ಪ್ರಜೆಗಳನ್ನಾಗಿಸಲು ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ರಾಜ್ಯಪಾಲರು ಬಣ್ಣಿಸಿದರು.

ಯುವಜನರಿಗೆ ಕೌಶಲ್ಯ ತರಬೇತಿ ಜೊತೆಗೆ ಉತ್ತಮ ಹಾಗೂ ಜವಾಬ್ದಾರಿಯುತ ಪ್ರಜೆಗಳಾಗಲು ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಒಳ್ಳೆಯ ಮಾರ್ಗದರ್ಶನ ನೀಡುತ್ತಿದೆ. ನೆರೆಯಂತಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್‌ನಿಂದ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರ ನೆರವಿಗೆ ಬಂದಿದ್ದಾರೆ. ಇದು ಸಹ ಶ್ಲಾಘನಿೀಯ ಎಂದು ರಾಜ್ಯಪಾಲರು ಹೇಳಿದರು.

ಪ್ರಸ್ತುತ ಭಾರತ್ ಸ್ಕೌಟ್ಸ್‌ನ ಸಂಖ್ಯೆ 5 ಲಕ್ಷ ಇದೆ ಎಂದು ಕೇಳಿದ್ದೇನೆ. ಈ ಸಂಖ್ಯೆಯನ್ನು ಮುಂದಿನ ವರ್ಷದೊತ್ತಿಗೆ ದುಪ್ಪಟ್ಟು ಮಾಡಿ. ಇದಕ್ಕೆ ವಿದ್ಯಾರ್ಥಿಗಳು ಸೇರ್ಪಡೆಯಾಗುವ ಸಂದರ್ಭದಲ್ಲಿ ಅವರ ಜೊತೆ ಮತ್ತೊಬ್ಬರನ್ನು ಕರೆ ತನ್ನಿ ಎಂದು ಹೇಳಿ, ಸ್ಕೌಟ್ಸ್ ಸೇರುವವರ ಸಂಖ್ಯೆಯನ್ನು ಹೆಚ್ಚಿಬಹುದು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಕಬ್ಸ್ ಬುಲ್ ಬುಲ್ಸ್, ಸ್ಕೌಟ್ಸ್ ಗೈಡ್ಸ್‌ಗೆ, ಚತುರ್ ಚರಣ್ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಿದರು. ಈ ವೇಳೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಉಪಾಧ್ಯಕ್ಷ ಕೊಂಡಜ್ಜಿ ಬಿ. ಷಣ್ಣುಗಪ್ಪ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News