ಮಲ್ಲಮ್ಮನ ಬದುಕು ನಮಗೆ ಆದರ್ಶವಾಗಲಿ: ಸಚಿವೆ ಶಶಿಕಲಾ ಜೊಲ್ಲೆ
ಬೆಳಗಾವಿ, ಫೆ.29: ರಾಜ್ಯ ಮತ್ತು ಪ್ರಜೆಗಳಿಗೆ ಸಂಕಟ ಬಂದಾಗ ಕೈಗೆ ಖಡ್ಗ ತೆಗೆದುಕೊಂಡು ಕೆಚ್ಚೆದೆಯ ಹೋರಾಟ ಮಾಡಿದ ವೀರವನಿತೆಯರ ಬದುಕನ್ನು ನಾವು ಮಾದರಿಯಾಗಿಟ್ಟುಕೊಳ್ಳಬೇಕು. ಇಂತಹ ವೀರ ಮಹಿಳೆಯರ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಕರೆ ನೀಡಿದರು.
ಇಲ್ಲಿನ ಬೆಳವಡಿಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಬೆಳವಡಿ ಮಲ್ಲಮ್ಮ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರ ದೊಡ್ಡ ಸೈನ್ಯದ ಜತೆಗೆ ಬೆಳವಡಿ ಮಲ್ಲಮ್ಮ ಸೆಣಸಾಡಿರುವುದು ಅಸಾಮಾನ್ಯ ಸಾಧನೆ. ಕನ್ನಡ ನೆಲದ ವೀರಪರಂಪರೆಯ ಮಹಿಳೆ ಮಲ್ಲಮ್ಮ. ಅವರ ದಿಟ್ಟ ವ್ಯಕ್ತಿತ್ವವನ್ನು ನಾವೆಲ್ಲರೂ ಪಾಲಿಸಿದರೆ ಸಾಧನೆ ಸಾಧ್ಯ ಎಂದು ಅವರು ಹೇಳಿದರು.
ಹೆಣ್ಣು ಎಂಬ ಭೇದ ತೋರದೆ ಮಲ್ಲಮ್ಮನ ತಂದೆ-ತಾಯಿಗಳು ನೀಡಿದ ಪ್ರೋತ್ಸಾಹ ಆಕೆಯಲ್ಲಿ ಅತ್ಯುತ್ತಮ ಸಂಸ್ಕಾರ ಮತ್ತು ಧೈರ್ಯಶಾಲಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಯಿತು. ಮೊದಲ ಮಹಿಳಾ ಸೈನ್ಯ ಕಟ್ಟಿದ ಬೆಳವಡಿ ಮಲ್ಲಮ್ಮ, ಬ್ರಿಟೀಷರ ವಿರುದ್ಧ ಹೋರಾಡಿದ ಕಿತ್ತೂರು ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಹೋರಾಟದ ಬದುಕು ಇಂದಿನ ಮಹಿಳೆಯರು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಶಶಿಕಲಾ ಜೊಲ್ಲೆ ಕರೆ ನೀಡಿದರು.
ರಾಣಿ ಮಲ್ಲಮ್ಮ ಪ್ರಶಸ್ತಿ ಪ್ರದಾನ: ಅಂಕಣಕಾರರಾದ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಗೆ ‘ರಾಣಿ ಮಲ್ಲಮ್ಮ ಪ್ರಶಸ್ತಿ’ಯನ್ನು ಶಶಿಕಲಾ ಜೊಲ್ಲೆ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಬೆಳವಡಿಯ ಈಶಪ್ರಭು ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಮ.ಮ.ಕಾಡೇಶನವರ ಅವರಿಗೆ ‘ರಾಜಶ ಈಶಪ್ರಭು ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಮಹಾಂತೇಶ ಕೌಜಲಗಿ ವಹಿಸಿದ್ದರು. ಹೂಲಿಯ ಹಿರೇಮಠ ಬೆಳವಡಿ ಸಂಸ್ಥಾನದ ರಾಜಗುರು ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.