ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆ, ಮೊದಲು ಹೇಳಲಿ: ಸಚಿವ ಕೆ.ಎಸ್.ಈಶ್ವರಪ್ಪ

Update: 2020-02-29 18:02 GMT

ಕೊಪ್ಪಳ, ಫೆ. 29: ‘ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಎಲ್ಲಿದ್ದಾರೆ ಮೊದಲು ಹೇಳಿ. ಆ ಬಳಿಕ ಅವರನ್ನು ಮುಟ್ಟುವುದು, ಬಿಡುವುದು.. ಆಮೇಲೆ ನೋಡೋಣ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ಕಾರ್ಯಕರ್ತರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ’ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆಂಬ ಭೂತಗನ್ನಡಿ ಹಾಕಿ ಹುಡುಕುತ್ತಿದ್ದೇನೆ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ತಾವೂ ಸೋತು, ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನೂ ಸೋಲಿಸಿದರು. ರಾಜ್ಯದಲ್ಲಿ ಈಗ ಜೆಡಿಎಸ್ ಪಕ್ಷ ಎಲ್ಲಿದೆ? ಅವರು ಎಲ್ಲಿಯಾದರೂ ಇದ್ದರೆ ಮುಟ್ಟುವ ಪ್ರಶ್ನೆ ಉದ್ಬವಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ನಾಯಕರು ಕೇವಲ ಪ್ರಚಾರಕ್ಕಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹೊಡೆಯುವ ಪಕ್ಷ ಅಲ್ಲ, ಅಪ್ಪಿಕೊಳ್ಳುವ ಪಕ್ಷ ಎಂಬುದು ನೆನಪಿರಲಿ ಎಂದ ಅವರು, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರಿಗೆ ನಿತ್ಯ ಸಿಎಂ ಕುರ್ಚಿ ಕನಸು ಬೀಳುತ್ತದೆ.

ಹೀಗಾಗಿ ಬಿಜೆಪಿ ವಿರುದ್ಧ ಮನಸೋ ಇಚ್ಛೆ ಮಾತನಾಡುವುದು ಬಿಟ್ಟು ಅವರಿಬ್ಬರಿಗೆ ಬೇರೆ ಕೆಲಸವೇ ಇಲ್ಲ. ತಾವು ಅಧಿಕಾರಕ್ಕೆ ಬರುತ್ತೇವೆ ಎಂದೂ ಇಬ್ಬರು ನಾಯಕರು ಹಗಲು ಗನಸು ಕಾಣುತ್ತಿದ್ದಾರೆ. ಅದು ಯಾವುದೇ ಕಾರಣಕ್ಕೂ ನನಸಾಗಲು ಸಾಧ್ಯವಿಲ್ಲ ಎಂದು ಈಶ್ವರಪ್ಪ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News