ದೊರೆಸ್ವಾಮಿ ಕುರಿತು ಯತ್ನಾಳ್ ಹೇಳಿಕೆ ಸಮಂಜಸವಲ್ಲ: ಅಯನೂರು ಮಂಜುನಾಥ್
ಶಿವಮೊಗ್ಗ: ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಬಗ್ಗೆ ಬಳಸಿರುವ ಪದ ಸಮಂಜಸವಲ್ಲ, ದೊರೆಸ್ವಾಮಿ ಶತಾಯುಷಿ. ಇವರಿಬ್ಬರ ಬಗ್ಗೆ ಪರ ವಿರೋಧ ಹೇಳಿಕೆ ನಡುವೆ ದೊರೆಸ್ವಾಮಿ ನಿತ್ಯ ಅಪಮಾನಕ್ಕೆ ಒಳಗಾಗುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ್ ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಕುರಿತು ಶಾಸಕ ಯತ್ನಾಳ್ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಮ್ಮ ಕ್ರೆಡಿಟ್ ಅನ್ನು ಎಲ್ಲದಕ್ಕೂ ಬಳಸಬಾರದು. ದೊರೆಸ್ವಾಮಿ ಯಾಗಿ ತಮ್ಮ ನಿಲುವು ಪ್ರಕಟ ಮಾಡುತ್ತಾರೋ ಅಥವಾ ಸ್ವಾತಂತ್ರ್ಯ ಹೋರಾಟಗಾರರಾಗಿ ತಮ್ಮ ನಿಲುವು ಪ್ರಕಟ ಮಾಡುತ್ತಾರೋ ಅವರು ಸ್ಪಷ್ಟ ಪಡಿಸಬೇಕು ಎಂದರು.
ಯತ್ನಾಳ ಹೇಳಿಕೆಯಿಂದ ದೊರೆಸ್ವಾಮಿ ನೂರು ವರ್ಷದಲ್ಲಿ ಅನುಭವಿಸದೇ ಇರುವುದನ್ನು ಈಗ ಅನುಭವಿಸುವಂತಾಗಿದೆ. ಈ ವಿವಾದ ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡುತ್ತೇನೆ ಎಂದರು.
ದೊರೆಸ್ವಾಮಿ ಅವರ ಕುರಿತು ಯತ್ನಾಳ್ ಹೇಳಿಕೆ ಕುರಿತಾದಂತೆ ಸಿದ್ದರಾಮಯ್ಯ ನವರು ಬಜೆಟ್ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂಬ ಹೇಳಿಕೆ ಕುರಿತು ಮಾತನಾಡಿದ ಅವರು ಸಿದ್ದರಾಮಯ್ಯ ನವರಿಗೆ ಬೇರೆ ವಿಷಯವೇ ಸಿಕ್ಕಿಲ್ಲ ಅದಕ್ಕೆ ಯತ್ನಾಳ ಹೇಳಿಕೆ ವಿಷಯ ಕುರಿತು ಅಧಿವೇಶನದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಾಗಿ ಇರೋಕೆ ಈ ವಿಷಯ ತೆಗೆದು ಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಶಾಸಕ, ಸಿಎಂ ಆದರೂ ಉತ್ತಮ ಪಾರ್ಲಿಮೆಂಟರಿಯನ್ ಆಗಲಿಲ್ಲ ಎಂದರು.