ಸಚಿವ ಆನಂದ್ ಸಿಂಗ್ 23 ಕೋಟಿ ರೂ.ಸಂಪತ್ತು ಕಬಳಿಸಿದ್ದಾರೆ: ವಿ.ಎಸ್.ಉಗ್ರಪ್ಪ ಆರೋಪ
ಬಳ್ಳಾರಿ, ಮಾ.1: ಅರಣ್ಯ ಸಚಿವ ಸಚಿವ ಆನಂದ್ ಸಿಂಗ್ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ 23 ಕೋಟಿಗೂ ಹೆಚ್ಚು ಸಂಪತ್ತನ್ನು ಕಬಳಿಸಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ರವಿವಾರ ಬಳ್ಳಾರಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದೇಶಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ರೀತಿ ನಾನು ತಿದ್ದಿಕೊಳ್ಳುವೆ ಎಂದು ಸಿಂಗ್ ಹೇಳುತ್ತಿದ್ದಾರೆ. ವಾಲ್ಮೀಕಿ ಜೊತೆ ಸಮೀಕರಣ ಮಾಡಿಕೊಳ್ಳುವುದನ್ನು ಸಿಂಗ್ ಬಿಡಬೇಕು. ವಾಲ್ಮೀಕಿ ಬಗ್ಗೆ ಮಾತನಾಡಿರುವ ಬಗ್ಗೆ ಕ್ಷಮೆ ಯಾಚನೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಅವರು ಎಚ್.ಎಸ್.ದೊರೆಸ್ವಾಮಿ ಸೇರಿದಂತೆ ಇನ್ನಿತರರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ಅವರು ಕುರಿ ಕಾಯಲು ಸಿಂಗ್‌ರಂತಹ ತೋಳವನ್ನು ನೇಮಿಸಿದ್ದೀರಿ. ಇದು ಸರಿಯೇ ಇದಕ್ಕೆ ಬಿಜೆಪಿಯವರೇ ಉತ್ತರಿಸಬೇಕೆಂದು ಹೇಳಿದರು.
ಲೋಕಾಯುಕ್ತ ವಿಶೇಷ ತನಿಖಾ ತಂಡದವರು ಆನಂದ್ ಸಿಂಗ್ ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದಾರೆ ಎಂದು ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದ ಅವರು, ಶಾಸಕ ನಾಗೇಂದ್ರ ಅವರು ಮಾಹಿತಿ ಕೊರತೆಯಿಂದಾಗಿ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ಕೊಟ್ಟಿರುವ ಬಗ್ಗೆ ಸಮರ್ಥಿಸಿಕೊಂಡಿರಬೇಕೆಂದು ಹೇಳಿದರು.