ಬಡವರ ಹೆಣಗಳ ರಾಶಿ ಮೇಲೆ ಕೇಂದ್ರ ಸರಕಾರದ ಅಧಿಕಾರ: ಈಶ್ವರ ಖಂಡ್ರೆ

Update: 2020-03-01 12:50 GMT

ಹುಬ್ಬಳ್ಳಿ, ಮಾ.1: ಕೇಂದ್ರ ಸರಕಾರದ ಪ್ರಾಯೋಜಕತ್ವದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ರವಿವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಕರ್ನಾಟಕದ ಆರ್ಥಿಕತೆಯ ಮೇಲೆ ಬರೆ ಎಳೆಯುತ್ತಿದ್ದು, ಇದರ ಪರಿಣಾಮ ರಾಜ್ಯದ ಹಣಕಾಸು ಸ್ಥಿತಿ ಅತ್ಯಂತ ಕೆಳಮಟ್ಟಕ್ಕಿಳಿದಿದೆ ಎಂದು ದೂರಿದರು.

ಕರ್ನಾಟಕದಲ್ಲಿ ಮೈತ್ರಿ ಸರಕಾರವನ್ನು ಕೆಡವಿ ಬಿಜೆಪಿ ಸರಕಾರ ರಚನೆಯಾಗಿ 7 ತಿಂಗಳು ಕಳೆಯುತ್ತಿದೆ. ಆದರೆ, ಈ ಅವಧಿಯಲ್ಲಿ ಸರಕಾರಿ ಸಿಬ್ಬಂದಿಗಳಿಗೆ ವೇತನ ನೀಡಲಾಗದಷ್ಟು ಹಣಕಾಸು ಮುಗ್ಗಟ್ಟು ಎದುರಿಸಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಜನರ ಮೇಲೆ ಪ್ರಹಾರ ನಡೆಸಲು ಮುಂದಾಗಿದ್ದಾರೆ ಎಂದು ಹೇಳಿದರು.

ರಾಜ್ಯ ಸರಕಾರ ಇದ್ದಕ್ಕಿದ್ದಂತೆ ಹಾಲಿದ ದರ, ಬಸ್ ಟಿಕೆಟ್ ದರ ಏರಿಕೆ ಮಾಡಿದ ಹಿಂದಿರುವ ಉದ್ದೇಶವಾದರೂ ಏನೆಂದು ತಿಳಿಯದು. ಕೇಂದ್ರ ಸರಕಾರ ಗ್ಯಾಸ್ ದರ, ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡುತ್ತಲೇ ಇದೆ. ಈ ಮೂಲಕ ಜನರ ಜೀವನವನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ ಅಚ್ಛೇ ದಿನ್ ಬಹುಶಃ ಇದೇ ಇರಬೇಕು ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಈ ಹಿಂದೆ ಎಂದೂ ಸಂಭವಿಸಿದ ರೀತಿಯ ಭೀಕರ ನೆರೆಯಿಂದ ಅಂದಾಜು 1 ಲಕ್ಷ ಕೋಟಿ ರೂ.ಗಳಷ್ಟು ಹಾನಿಯಾಗಿದೆ. ಆದರೆ, ಕೇಂದ್ರ ಸರಕಾರ ಕೇವಲ 1,600 ಕೋಟಿ ರೂ.ಪರಿಹಾರ ನೀಡಿದೆ. ಇದರಿಂದ, ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರಿಗೆ ಸೂರು ನೀಡಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ವೈಫಲ್ಯ ಮುಚ್ಚಿಕೊಳ್ಳಲು ಸಿಎಎ ಜಾರಿ: ಕೇಂದ್ರ ತನ್ನ ವೈಫಲ್ಯಗಳನ್ನು ಮರೆಮಾಚಲು ಧರ್ಮಾಧಾರಿತ ಕಾನೂನಾದ ಸಿಎಎ ಜಾರಿಗೆ ಮುಂದಾಗಿದೆ. ಈ ಮೂಲಕ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸಿ, ದೇಶದಾದ್ಯಂತ ಗಲಭೆಗಳಿಗೆ ದಾರಿ ಮಾಡಿಕೊಡಲಾಗುತ್ತಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು. ದೇಶದಲ್ಲಿ ನಡೆಯುತ್ತಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಉದ್ದೇಶಪೂರ್ವಕವಾಗಿ ಹಿಂಸಾತ್ಮಕವಾಗಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ದಿಲ್ಲಿಯಲ್ಲಿ ನಡೆದ ಘಟನೆಯಲ್ಲಿ 50ಕ್ಕೂ ಅಧಿಕ ಮಂದಿ ಪ್ರಾಣ ತ್ಯಜಿಸಿದ್ದಾರೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಗೃಹ ಸಚಿವ ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದ ಅವರು, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ಬಿಜೆಪಿಯವರು ನೀಡುತ್ತಿದ್ದಾರೆ. ಇದರಿಂದಾಗಿ ನಡೆಯುತ್ತಿರುವ ಗಲಭೆಯಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಬಡವರ ಹೆಣಗಳ ರಾಶಿ ಮೇಲೆ ಕೇಂದ್ರ ಸರಕಾರ ಅಧಿಕಾರ ನಡೆಸುತ್ತಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News