ಕೈದಿಗಳ ಭೇಟಿಗೆ ಸೂಕ್ತ ವ್ಯವಸ್ಥೆ ಒದಗಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಮಾ.1: ರಾಜ್ಯದಾದ್ಯಂತ ಕಾರಾಗೃಹಗಳಲ್ಲಿ ಕೈದಿಗಳು ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ, ಸರಕಾರದ ಪರ ವಕೀಲ ವೈ.ಎಚ್. ವಿಜಯಕುಮಾರ್, ಕೇಂದ್ರ ಕಾರಾಗೃಹದಲ್ಲಿನ ಸಂದರ್ಶನ ವ್ಯವಸ್ಥೆಯ ಕುರಿತಂತೆ ಫೋಟೊಗಳನ್ನು ಒಳಗೊಂಡ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ವರದಿ ಪರಿಶೀಲಿಸಿದ ನ್ಯಾಯಪೀಠ, ಕೈದಿಗಳು ಮತ್ತು ಸಂದರ್ಶಕರ ಭೇಟಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಫೋಟೊಗಳನ್ನು ಗಮನಿಸಿದರೆ ಸಮಸ್ಯೆ ಇರುವುದು ಗೋತ್ತಾಗುತ್ತದೆ. ಪ್ರಾಯಶಃ ರಾಜ್ಯದ ಎಲ್ಲಾ ಕಾರಾಗೃಹಗಳ ಸ್ಥಿತಿಯೂ ಇದೇ ಆಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
ಕಾರಾಗೃಹಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಂತ-ಹಂತವಾಗಿ ಕ್ರಮ ಕೈಗೊಳ್ಳಲು ಕಾರ್ಯ ಯೋಜನೆ ರೂಪಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ನಿರ್ದೇಶಿಸಿದ ಪೀಠ ವಿಚಾರಣೆಯನ್ನು ಎ.15ಕ್ಕೆ ಮುಂದೂಡಿದೆ.