ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ 'ಭಿಕ್ಷಾಯಾತ್ರೆ' ಆರಂಭಿಸಿದ ಕಾಂಗ್ರೆಸ್‌

Update: 2020-03-01 14:48 GMT

ಅಥಣಿ, ಮಾ.1: ಇತ್ತೀಚಿಗೆ ಉತ್ತರ ಕರ್ನಾಟಕದಲ್ಲಾದ ಭೀಕರ ಪ್ರವಾಹದಲ್ಲಿ ಸಂತ್ರಸ್ತರಾದವರ ನೆರವಿಗೆ ನಿಲ್ಲುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂತ್ರಸ್ತರ ನೆರವಿಗಾಗಿ ಭಿಕ್ಷಾಯಾತ್ರೆ ಅಭಿಯಾನ ಕಾರ್ಯಕ್ರಮ ನಡೆಸುತ್ತಿದ್ದಾರೆ.

ರವಿವಾರ ನಗರದಲ್ಲಿ ನೆರೆ ಸಂತ್ರಸ್ತರಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ಭಿಕ್ಷಾಟನೆ ಮಾಡುವ ಮೂಲಕ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ನೆರೆ ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ತಾಲೂಕಿನಲ್ಲಿ ಕೃಷ್ಣಾ ನದಿಯಿಂದ ಹಾನಿಗೆ ಒಳಗಾದ ಒಂದು ಗ್ರಾಮಕ್ಕೂ ಪರಿಹಾರ ಬಂದಿಲ್ಲ ಎಂದು ಅಪಾದಿಸಿದರು. ಕಳೆದ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಎಂದೂ ಕಂಡರಿಯದ ರೀತಿಯಲ್ಲಿ ಉಂಟಾದ ಪ್ರವಾಹದಿಂದ ಜನರ ಬದುಕು ದುಸ್ತರವಾಗಿದೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎನ್ನುವ ಕರುಣೆಯೂ ಸರಕಾರಕ್ಕೆ ಇಲ್ಲ ಎಂದು ಅವರು ಹೇಳಿದರು.

ಸಂತ್ರಸ್ತರಿಗಾಗಿ ನಾವು ಭಿಕ್ಷಾಟನೆ ಮಾಡುವ ಮೂಲಕ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದೇವೆ. ಸರಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕೂಡಲೇ ಪರಿಹಾರ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಶಿಂಗೆ ಮಾತನಾಡಿ, ಸರಕಾರವು ಆರ್ಥಿಕವಾಗಿ ಹಾಗೂ ನೈತಿಕವಾಗಿ ದಿವಾಳಿಯಾಗಿದ್ದು, ಅಧಿಕಾರದಲ್ಲಿರುವ ಸರಕಾರಕ್ಕೆ ನೈತಿಕತೆಯಿಲ್ಲದಂತಾಗಿದೆ. ಆಪರೇಷನ್ ಕಮಲದ ಮೂಲಕ ಕೆಲವು ಶಾಸಕರನ್ನು ತಮ್ಮತ್ತ ಸೆಳೆದುಕೊಂಡು, ಉಪ ಚುನಾವಣೆಯಲ್ಲಿ ಸುಳ್ಳು ಭರವಸೆ ಕೊಟ್ಟು ಜನರನ್ನು ನಂಬಿಸಿದರು. ಈಗ, ಆ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ಪಕ್ಷದ ತೆಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಮುಖಂಡರಾದ ಸುನೀಲ ಸಂಕ, ರಮೇಶ ಸಿಂದಗಿ, ದರೇಪ್ಪ ಠಕ್ಕಣ್ಣವರ, ನಿಶಾಂತ ದಳವಾಯಿ, ಸಂಜಯ ಕಾಂಬಳೆ, ರೇಖಾ ಪಾಟೀಲ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News