×
Ad

ದೊರೆಸ್ವಾಮಿ ಬಗ್ಗೆ ಅವಮಾನಕರ ಹೇಳಿಕೆ ಹಿಂದೆ ಸಂಘಪರಿವಾರದ ಕೈವಾಡ: ಸಿದ್ದರಾಮಯ್ಯ

Update: 2020-03-01 20:53 IST

ಬೆಂಗಳೂರು, ಮಾ.1: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ವಿರುದ್ಧ ಅಪಮಾನಕರವಾಗಿ ಮಾತನಾಡುತ್ತಿರುವುದರ ಹಿಂದೆ ಸಂಘಪರಿವಾರದ ಸಂಚಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರವಿವಾರ ನಗರದ ಗಾಂಧೀ ಭವನದ ಬಳಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೊರೆಸ್ವಾಮಿಯನ್ನು ಅಪಮಾನಿಸುವುದರ ಹಿಂದೆ ದೊಡ್ಡ ಸಂಚಿದೆ. ಕಾಣದ ಕೈಗಳು ಇವರ ಮೂಲಕ ಇಂತಹ ಹೇಳಿಕೆಗಳನ್ನು ಕೊಡಿಸುತ್ತಿವೆ ಎಂದು ದೂರಿದರು.

ಈ ಹಿಂದೆ ದಕ್ಷಿಣ ಕನ್ನಡದ ಸಂಸದ ಅನಂತ್‌ಕುಮಾರ್ ಹೆಗಡೆ ಗಾಂಧೀಜಿಯ ಬಗ್ಗೆ ಕೀಳಾಗಿ ಮಾತನಾಡಿದ್ದರು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದರೆ, ಇವರ ಹಿಂದೆ ಆರೆಸ್ಸೆಸ್‌ನ ಕೈವಾಡವಿದ್ದು, ಅವರೇ ಇದಕ್ಕೆ ಪುಷ್ಠಿ ನೀಡುತ್ತಿದ್ದಾರೆ. ಬಿಜೆಪಿಯು ಹಿಂಸಾಚಾರದ ಮೂಲಕ ಮತ ಸಮೀಕರಣ ಮಾಡುತ್ತಿದೆ. ಮತ್ತೊಂದು ಕಡೆ ನೈಜ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ ಎಂದರು.

ದೇಶದಲ್ಲಿ ಕಳೆದ ಆರು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ, ಜನರ ಭಾವನೆಗಳನ್ನು ತಿರುಗಿಸಲು ಈ ಪ್ರಯತ್ನ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪ, ಬಸನಗೌಡ ಯತ್ನಾಳ್ ಇವರು ಸದನದಲ್ಲಿ ಇರೋದು. ಜನ ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ಆಯ್ಕೆ ಮಾಡಿ ಕಳಿಸಿದ್ದಾರೆ. ಅಲ್ಲಿ ನಾವು ಇದ್ದೇವೆ. ನಮ್ಮನ್ನೂ ಜನರೇ ಆರಿಸಿ ಕಳಿಸಿರೋದು. ಈಶ್ವರಪ್ಪ ಹೇಳಿದ್ದೆ ನಡೆಯೋದಾ ಎಂದು ಈಶ್ವರಪ್ಪಗೆ ತಿರುಗೇಟು ನೀಡಿದರು.

ಒಳ್ಳೆಯ ಬಜೆಟ್ ಅಸಾಧ್ಯ
ರಾಜ್ಯದಲ್ಲಿ ಈಗಾಗಲೇ ಆರ್ಥಿಕ ಹಿಂಜರಿತ ಇದೆ. ಕೇಂದ್ರ ಸರಕಾರದಿಂದ ಹಣಕಾಸಿನ ನೆರವು ನೀಡುತ್ತಿಲ್ಲ. ನಾವು ರಾಜ್ಯದಿಂದ ಶೇ.100 ರಷ್ಟು ತೆರಿಗೆ ಸಂಗ್ರಹ ಮಾಡಿದರೂ, ರಾಜ್ಯದ ಪಾಲು ಶೇ.45 ರಷ್ಟಿದೆ. ಉಳಿದದ್ದು ಕೇಂದ್ರವೇ ಉಳಿಸಿಕೊಳ್ಳುತ್ತಿದೆ. ನಮ್ಮ ಜಿಎಸ್ಟಿ ಹಣವೂ ನೀಡುತ್ತಿಲ್ಲ. ಬಿಜೆಪಿಯ ಸಂಸದರು ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ಯಾವೊಬ್ಬ ರಾಜ್ಯದ ಮಂತ್ರಿಯೂ ಮಾತಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ಕಾರವಾಗಿ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News