ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸಿ: ಸಚಿವ ಸಿ.ಟಿ.ರವಿ

Update: 2020-03-01 18:04 GMT

ಚಿಕ್ಕಮಗಳೂರು, ಫೆ.29: ನಶಿಸಿ ಹೋಗುತ್ತಿರುವ ಸಾಂಪ್ರಾದಾಯಿಕ ಕಲೆಗಳನ್ನು ಉಳಿಸಿ ಬೆಳೆಸಿ, ಪ್ರೋತ್ಸಾಹಿಸುವ ಉದ್ದೇಶದಿಂದಾಗಿ ಚಿಕ್ಕಮಗಳೂರು ಹಬ್ಬದಲ್ಲಿ ಅಲೆಮಾರಿ ಸಮುದಾಯದವರ ವಿವಿಧ ಕಲೆ ಮತ್ತು ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಹೇಳಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಅಲೆಮಾರಿ ಸಮುದಾಯದವರ ಕಲಾವಿದರ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿರುವ ಅಳಿವಿನಂಚಿನಲ್ಲಿರುವ ಕಲೆಯನ್ನು ಪ್ರದರ್ಶಿಸಲು ಜಿಲ್ಲಾ ಉತ್ಸವಕ್ಕೆ ಬಂದಿರುವುದು ಸಂತಸದ ವಿಷಯ. ಅಲೆಮಾರಿ ಜನಾಂಗದವರ ಕಲೆಗಳನ್ನು ಉಳಿಸಿ ಬೆಳೆಸುವುದು ಸರಕಾರ ಹಾಗೂ ಸಮಾಜದ ಆದ್ಯ ಕರ್ತವ್ಯವಾಗಿದ್ದು ಇಂದಿನ ಕಾಲಕ್ಕೆ ತಕ್ಕಂತೆ ಆಧುನಿಕ ತಾಂತ್ರಿಕ ಸ್ಪರ್ಶ ನೀಡಿ ಕಲೆಯನ್ನು ಮುಂದಿನ ಜನಾಂಗಕ್ಕೂ ಪರಿಚಯಿಸಬೇಕಿದೆ ಎಂದರು.

ನಗರದ ಹೊಸಮನೆ ಬಡಾವಣೆ, ಅಜಾದ್ ಪಾರ್ಕ್, ಬಸವನಗುಡಿ, ಅಂಡೆ ಛತ್ರ, ವಿನಾಯಕ ಪಾಯಿಂಟ್, ಸೇರಿದಂತೆ 8 ಪ್ರಮುಖ ಭಾಗಗಳಲ್ಲಿ ಉಪ ವೇದಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಗರ್ದಿಗಮ್ಮತ್ತು, ಬುರ್ರಾಕಥಾ, ಹುಲಿವೇಷ, ಹಗಲುವೇಷ, ದೊಂಬರಾಟ, ಸುಡುಗಾಡು ಸಿದ್ದರ ಕೈಚಳಕ, ಜಾನಪದ ನೃತ್ಯ, ಸೋಬಾನೆ ಹಾಡು, ಕರಡಿ ಕುಣಿತ, ಬುಡಬುಡಕಿ ಶಾಸ್ತ್ರ, ಹಕ್ಕಿ ಪಿಕ್ಕಿ ನೃತ್ಯ, ಗೋಂದಳಿಗರ ಹಾಡು, ಬೆಂಕಿ ನೃತ್ಯ, ಜೆಂಟ್ಸ್ ತುಷಾರ ಡೋಲು, ಮಹಿಳಾ ತುಷಾರ ಡೋಲಿ, ಜಾದೂ, ಭರತನಾಟ್ಯ, ಹಾಗೂ ಬೂತಕೋಲಾ ಸೇರಿದಂತೆ ಮತ್ತಿತರ ಕಲಾ ಪ್ರದರ್ಶನಗಳು ನಡೆಯಲಿವೆ.ಸಾರ್ವಜನಿಕರೆಲ್ಲರೂ ಪಾಲ್ಗೊಂಡು ಸಂಭ್ರಮಿಸಿ ಎಂದರು.

ಉತ್ಸವಕ್ಕೆ ಬಂದಿರುವ ಕಲಾವಿದರ ವಸತಿ ಹಾಗೂ ಆಹಾರದ ಬಗ್ಗೆ ಮಾಹಿತಿ ಪಡೆದು ಪ್ರತೀ ಕಲಾವಿದರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜ ಇಲಾಖೆ ಉಪನಿರ್ದೇಶಕ ಹಾಗೂ ಆಹಾರ ಮೇಳ ಉಪಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ಆಹಾರ ಮೇಳ ಸಮಿತಿ ಸದಸ್ಯ ವರಸಿದ್ದಿ ವೇಣುಗೋಪಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News