×
Ad

"ಬಜೆಟ್‍ನಲ್ಲಿ ಕೊರಚ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅರೆಬೆತ್ತಲೆ ಹೋರಾಟ"

Update: 2020-03-01 23:39 IST

ದಾವಣಗೆರೆ, ಮಾ.1: ಅತ್ಯಂತ ಹಿಂದುಳಿದಿರುವ ಕೊರಚ ಸಮುದಾಯವನ್ನು ಎಲ್ಲಾ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ಈ ಬಾರಿಯ ಬಜೆಟ್‍ನಲ್ಲಿ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅರೆಬೆತ್ತಲೆ ಹೋರಾಟ ನಡೆಸಲಾಗುವುದು ಎಂದು ಮುಖಂಡ ಓಂಕಾರಪ್ಪ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 10 ರಿಂದ 12 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಇಲ್ಲಿಯವರೆಗೆ ಆಳಿದ ಯಾವುದೇ ಸರ್ಕಾರಗಳು ಸಮುದಾಯದ ಏಳಿಗೆಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿವೆ. ಅಂಬೇಡ್ಕರ್ ಅಭಿವೃದ್ದಿ ನಿಗಮಗಳಲ್ಲಿ ನಮ್ಮ ಸಮುದಾಯದ ಒಬ್ಬರಿಗೂ ಸೌಲಭ್ಯ ನೀಡಿಲ್ಲ. ಗಂಗಕಲ್ಯಾಣ ಯೋಜನೆ ಸೇರಿದಂತೆ ಯಾವುದೇ ಸೌಕರ್ಯಗಳು ನಮ್ಮ ಸಮುದಾಯಕ್ಕೆ ನೀಡದೆ ಸಂಪೂರ್ಣ ಅಲಕ್ಷ್ಯ ಮಾಡಿವೆ. ಸರ್ಕಾರಗಳು ನಮ್ಮ ಸಮುದಾಯ ಬಗ್ಗೆ ಕುರುಡು ನೀತಿ ಅನುಸರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ನಮ್ಮ ಸಮುದಾಯಕ್ಕೆ ಪ್ರತ್ಯೇಕವಾಗಿ ನಿಗಮ ಮಂಡಳಿ ನೀಡಬೇಕು, ಜಿಲ್ಲೆಗೊಂದು ಸಮಾಜದ ಹೆಸರಲ್ಲಿ ನಿವೇಶನ ನೀಡಿ ಸಮುದಾಯಭವನ ನಿರ್ಮಾಣ ಮಾಡಬೇಕು. ವಸತಿ ನಿಲಯ ಸ್ಥಾಪಿಸಬೇಕು. ನಮ್ಮಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕ್ರೀಡಾಪಟುಗಳಿದ್ದಾರೆ. ಅದರೆ, ಅವರಿಗೆ ಪ್ರೋತ್ಸಾಸ ನೀಡುವಲ್ಲಿ ಇಲಾಖೆಗಳು ನಿರ್ಲಕ್ಷ್ಯ ತೋರಿವೆ. ಯುವಜನ ಸೇವಾ ಇಲಾಖೆಗೂ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಅಲ್ಲದೇ ನಮ್ಮ ಸಮುದಾಯವನ್ನು ಅಲೆಮಾರಿ ಜನಾಂಗದ ಪಟ್ಟಿಗೆ ಸೇರಿಸಲಾಗಿದೆ. ಅಲ್ಲಿಯೂ ನಮಗೆ ಸೌಲಭ್ಯಗಳು ಸಿಗುತ್ತಿಲ್ಲ. ಅದ್ದರಿಂದ ಈ ಬಜೆಟ್‍ನಲ್ಲಿ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಿ ಸಮುದಾಯ ಅಭಿವೃದ್ದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.  

ಒಂದು ವೇಳೆ ಸಮುದಾಯದ ಬೇಡಿಕೆಗಳಿಗೆ ಬಜೆಟ್‍ನಲ್ಲಿ ಸ್ಪಂದಿಸದಿದ್ದರೆ ಇದೇ 9 ರಂದು ಸರ್ಕಾರದ ವಿರುದ್ಧ ಉಪವಿಭಾಗಾಧಿಕಾರಿಗಳ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಸರಕಾರದ ವಿರುದ್ದ ಅರೆಬೆತ್ತಲೆ ಮೆರವಣೆಗೆ ನಡೆಸಲಾಗುವುದು ಎಂದು ಎಚ್ಚರಿಸಿದರು. 

ವಕೀಲ ಕುಮಾರ್ ಮಾತನಾಡಿ, ನಮ್ಮ ಸಮುದಾಯವನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡುವಂತೆ ಸಹೋದರ ಸಮುದಾಯದವರು ಸುಪ್ರೀಂ ಕೋರ್ಟ್ ಮೆಟ್ಟಲು ಹೇರಿದ್ದಾರೆ. ನಮ್ಮ ಸಮುದಾಯ ಸಹ ಶೋಷಿತ ಸಮಾಜವಾಗಿದೆ. ನಮ್ಮನ್ನು ಸಮಾಜದಿಂದ ದೂರ ಇರಿಸುವ ಪ್ರಯತ್ನಗಳು ನಡೆದಿವೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಮಾರಪ್ಪ, ರಾಮಣ್ಣ, ಸಾತಪಡಿ, ದುರಗಪ್ಪ, ಚಿತ್ರದುರ್ಗದ ಸಮುದಾಯದ ಜಿಲ್ಲಾಧ್ಯಕ್ಷ ವೈ.ಕುಮಾರ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News