×
Ad

ಬಿಜೆಪಿಗೆ ಚಿಂತಕರು ಬೇಕಿಲ್ಲ, ಹಂತಕರ ಪಡೆ ಮಾತ್ರ ಬೇಕಿದೆ: ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ

Update: 2020-03-02 17:46 IST

ಕಲಬುರಗಿ, ಮಾ.2: ಬಿಜೆಪಿ ನಾಯಕರಿಗೆ ಚಿಂತಕರು ಬೇಕಿಲ್ಲ. ದೇಶಕ್ಕೆ ಅಪಾಯಕಾರಿಯಾಗಿರುವ ಹಂತಕರ ಪಡೆ ಮಾತ್ರ ಬೇಕಿದೆ ಎಂದು ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶ ಅಭಿವೃದ್ಧಿಯಾಗಬೇಕಾದರೆ ಚಿಂತಕರ ಪಡೆ ಅವಶ್ಯಕ. ಚಿಂತಕರಿಂದಲೇ ದೇಶ ನಡೆಯುತ್ತದೆ. ಆದರೆ, ಬಿಜೆಪಿಗೆ ಚಿಂತಕರ ಪಡೆ ಬೇಕಿಲ್ಲ. ಅವರಿಗೆ ಹಂತಕರ ಪಡೆ ಮಾತ್ರ ಬೇಕಿದೆ. ಅದಕ್ಕಾಗಿಯೇ ಫ್ಯೂಡಲ್ ರಾಜಕಾರಣಿಗಳನ್ನು ಎತ್ತಿಕಟ್ಟುವ ಕೆಲಸ ನಡೆದಿದೆ. ದೊರೆಸ್ವಾಮಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಎತ್ತಿಕಟ್ಟಲಾಗುತ್ತಿದೆ ಎಂದು ಆರೋಪಿಸಿದರು.

ಪೌರತ್ವ ವಿರೋಧಿ ಹೋರಾಟ ನೆಪಮಾಡಿಕೊಂಡು ದೇಶದ ಮೂಲಭೂತ ಸಮಸ್ಯೆಗಳನ್ನು ಬದಿಗೆ ಸರಿಸುವ ಕೆಲಸ ಬಿಜೆಪಿಯಿಂದ ನಡೆದಿದೆ. ದೇಶಾದ್ಯಂತ ಭಯ ಹುಟ್ಟಿಸಿ, ಜನ ಸಾಮಾನ್ಯರು ನಡೆಸುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಆಡಳಿತವನ್ನು ಮತ್ತು ಆಡಳಿತಾರೂಢ ಪಕ್ಷವನ್ನು ಪ್ರಶ್ನೆಯೇ ಮಾಡಬಾರದೆಂಬ ವಾತಾವರಣ ಸೃಷ್ಟಿಸುತ್ತಿರುವುದು ಸರಿಯಲ್ಲವೆಂದು ಅವರು ಕಿಡಿಕಾರಿದರು.

ಯತ್ನಾಳರ ಹೇಳಿಕೆಯನ್ನು ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಷಿ, ಈಶ್ವರಪ್ಪ, ಸುರೇಶ್‌ ಕುಮಾರ್, ಅಶ್ವಥ್ ನಾರಾಯಣ ಮತ್ತಿತರ ಹಿರಿಯ ನಾಯಕರು ಸಮರ್ಥಿಸುತ್ತಾರೆ. ಆ ಮೂಲಕ ಅರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ದೊರೆಸ್ವಾಮಿಯನ್ನು ಟೀಕಿಸುವ ಹಕ್ಕಿದೆ. ಹಾಗೆಂದು ಟೀಕಿಸುವ ಭರದಲ್ಲಿ ಪಾಕಿಸ್ತಾನ್ ಏಜೆಂಟ್ ಇತ್ಯಾದಿಯಾಗಿ ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲವೆಂದು ಅವರು ಆಕ್ರೊಶ ವ್ಯಕ್ತಪಡಿಸಿದರು.

ಪ್ರತಿಭಟನೆ: ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ರಾಜೀನಾಮೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಗತ್ ವೃತ್ತದಿಂದ ಟೌನ್‌ಹಾಲ್ ವರೆಗೆ ದೊರೆಸ್ವಾಮಿ ನಮ್ಮ ಹೆಮ್ಮೆ ಎಂಬ ಭಾವಚಿತ್ರ ಹಿಡಿದು ಮೆರವಣಿಗೆ ಮಾಡುತ್ತಾ, ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಶಾಸಕ ಯತ್ನಾಳ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News