ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಶಾಸಕ ಯತ್ನಾಳ್ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ

Update: 2020-03-02 12:22 GMT

ಕಲಬುರಗಿ, ಮಾ.2: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಯಾತ್ನಾಳ್ ಮತ್ತು ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರ ವಿರುದ್ಧ ಇಂದು ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸಂವಿಧಾನ ಪರ ಸಂಘಟನೆಗಳ ಒಕ್ಕೂಟ ಮತ್ತು ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸದ ಆರೆಸ್ಸೆಸ್ ಮತ್ತು ಸಂಘಪರಿವಾರದವರಿಗೆ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಕಂಡರೆ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಸ್ವಾತಂತ್ರ್ಯ ಹೋರಾಟದ ಸಂದಭದಲ್ಲಿ ಬ್ರಿಟೀಷರ ಪರವಾಗಿದ್ದ ಸಂಘಿಗಳು ಇಂದು ದೇಶೀಯ ಮತ್ತು ವಿದೇಶಿ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸಮಾಡುತ್ತಿದ್ದಾರೆ ಎಂದು ಪ್ರೊ.ಆರ್.ಕೆ.ಹುಡಗಿ ಆರೋಪಿಸಿದರು. 

ದೇಶದ ಜನರ ಸಾಮಾನ್ಯರ, ರೈತರ, ಕಾರ್ಮಿಕರ, ವಿದ್ಯಾರ್ಥಿ-ಯುವಕರ, ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುವವರು, ಸರಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸುವವರನ್ನು ದೇಶದ್ರೋಹಿ, ಪಾಕಿಸ್ತಾನ ಪರ, ಅರ್ಬನ್ ನಕ್ಸಲ್ ಎನ್ನುವಂತೆ ಬಿಂಬಿಸುತ್ತಾ ಅವರನ್ನು ಜೈಲಿಗೆ ಹಾಕಲಾಗುತ್ತಿದೆ. ಇದರ ಭಾಗವಾಗಿ ಯಾತ್ನಾಳ್ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿಯವರ ಕುರಿತು ಕೆಟ್ಟದಾಗಿ ಮಾತನಾಡಿದ್ದು, ಮತ್ತು ಅದನ್ನು ಕೆಲ ಬಿಜೆಪಿಯ ಹಿರಿಯ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಉಳಿದ ಪಕ್ಷದ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಹಿಸಿದ್ದಾರೆ ಎಂದು ಕಿಡಿಗಾರಿದರು. 

ಬಿಜೆಪಿ ನಾಯಕರಿಗೆ ಸಾತಂತ್ರ್ಯದ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಯಾತ್ನಾಳ್ ಹೇಳಿಕೆಯನ್ನು ಖಂಡಿಸಿ, ಅವರ ವಿರುದ್ಧ ಕ್ರಮ ಕೈಗೊಂಡು, ಶಾಸಕ ಸ್ಥಾನದಿಂದ ರಾಜಿನಾಮೆ ಪಡೆಯಬೇಕೆಂದು ಪ್ರತಿಭಟನಾ ನಿರತ ಹೋರಾಟಗಾರರು ಆಗ್ರಹಿಸಿದರು.

ಈ ವೇಳೆಯಲ್ಲಿ ಡಾ.ಸಿದ್ದನಗೌಡ ಪಾಟೀಲ್, ನಗೌಡ ಪಾಟೀಲ್, ಕೆ.ನೀಲಾ, ಅರ್ಜುನಭದ್ರೆ, ಎಂ. ಗೋಖಲೆ, ಭೀಮಾಶಂಕರ ಮಾಡಿಯಾಳ, ಮಾರುತಿ ಗೋಖಲೆ, ದತ್ತಾತ್ರೇಯ ಇಕ್ಕಳಲಿ, ಡಾ.ಮಹೇಶ್ ರಾಠೋಡ್, ಅಶ್ವಿನಿ ಮದನಕರ್, ಲಕ್ಷ್ಮೀಕಾಂತ ಹುಬ್ಬಳ್ಳಿ, ಪ್ರಭುದೇವ ಯಳಸಂಗಿ, ಹೆಚ್.ಎಸ.ಪತಕಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News