×
Ad

ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶಭಕ್ತ: ಮಲ್ಲಿಕಾರ್ಜುನ ಖರ್ಗೆ

Update: 2020-03-02 20:05 IST

ಶಹಾಪುರ, ಮಾ.2: ದೇಶಭಕ್ತಿ ಹಾಗೂ ದೇಶದ ಏಕತೆ ಯಾರೊಬ್ಬರ ಸ್ವತ್ತಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶಭಕ್ತರೇ ಎಂಬುದನ್ನು ಮರೆಯಬಾರದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ

ಸೋಮವಾರ ತಾಲೂಕಿನ ಹತ್ತಿಗುಡೂರು ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನವು ಪ್ರತಿಯೊಬ್ಬರಿಗೂ ಉತ್ತಮ ಅವಕಾಶಗಳನ್ನು ನೀಡಿದೆ. ಸಂವಿಧಾನವನ್ನು ಮುನ್ನಡೆಸುವ ಜನಪ್ರತಿನಿಧಿಗಳು ಸರಿಯಾಗಿದ್ದರೆ, ದೇಶ ಸರಿಯಾದ ಮಾರ್ಗದಲ್ಲಿ ಸಾಗುತ್ತದೆ ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್‌ರ ಆಶಯದಿಂದ, ಸಂವಿಧಾನದಿಂದ ಇಂದು ಎಲ್ಲರಿಗೂ ಅಧಿಕಾರವನ್ನು ಪಡೆಯುವ ಅವಕಾಶ ದೊರಕಿದೆ. ಇದನ್ನು ಜನಪ್ರತಿನಿಧಿಗಳು ತಿಳಿದುಕೊಳ್ಳಬೇಕಿದೆ. ಸರ್ವರಿಗೂ ಸಮಪಾಲು ಕಲ್ಪಿಸುವ, ಸರ್ವರಿಗೂ ನ್ಯಾಯ ದೊರಕಿಸಿಕೊಡುವ, ದೇಶದ 130 ಕೋಟಿ ಜನತೆಯ ಶ್ರೇಯೋಭಿವೃದ್ಧಿ ಬಯಸುವ ವ್ಯವಸ್ಥೆ ಸಂವಿಧಾನದಲ್ಲಿ ಅಡಕವಾಗಿದೆ. ಸಂವಿಧಾನದ ಆಶಯದಂತೆ ನಾವೆಲ್ಲರೂ ಸಾಗಬೇಕು ಎಂದರು.

ಎಲ್ಲ ಧರ್ಮಗಳಿಗೂ ಆಯಾ ಧರ್ಮಗ್ರಂಥಗಳು ಮುಖ್ಯವಾಗಿದೆ. ಆದರೆ, ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲರಿಗೂ ಅನ್ವಯವಾಗುವಂತಹ ಏಕೈಕ ಗ್ರಂಥ ಸಂವಿಧಾನವಾಗಿದೆ. ಹೀಗಾಗಿ, ಇದನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತ ಮಾಡಬಾರದು ಎಂದು ಖರ್ಗೆ ಹೇಳಿದರು.

ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಎಲ್ಲರಿಗೂ ಸಮಾನತೆಯನ್ನು ಕಲ್ಪಿಸುವ ಕೆಲಸ ಮಾಡಿದ್ದಾರೆ. ಇಂತಹ ಮಾನವತಾವಾದಿಯನ್ನು ಒಂದು ಜಾತಿಗೆ ಸೀಮಿತಗೊಳಸಲು ಮುಂದಾಗಬೇಡಿ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟುಗೂಡಿ ಪುತ್ಥಳಿಯನ್ನು ಅನಾವರಣ ಮಾಡಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದರು ಕಾಳಜಿ ವಹಿಸಲಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನ ನೀಡುವಂತೆ ಈ ಭಾಗದ ಸಂಸದರು ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು. ಕಾಳಜಿ ವಹಿಸಿದರೆ ಅನುದಾನ ಬೇರೆ ಬೇರೆ ಜಿಲ್ಲೆಗಳಿಗೆ ಸೀಮಿತವಾಗುತ್ತದೆ. ಇದರಿಂದ ಅಭಿವೃದ್ಧಿಗೆ ಹೊಡೆತ ಬೀಳುವುದು ಎಂದು ಹೇಳಿದರು.

ಸಂಸದರಾದ ರಾಜಾ ಅಮರೇಶ ನಾಯಕ, ಶಾಸಕ ಶರಣಬಸಪ್ಪದರ್ಶನಾಪುರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಪಾಟೀಲ್, ಮಾಜಿ ಸಂಸದ ಬಿ.ವಿ.ನಾಯಕ, ಡಾ.ಚಂದ್ರಶೇಖರ ಸುಬೇದಾರ, ಜ್ಞಾನ ಪ್ರಕಾಶ ಸ್ವಾಮೀಜಿ, ಕಬೀರಾನಂದ ಸ್ವಾಮೀಜಿ, ಗಿರಿಮಲ್ಲಯ್ಯ ಸ್ವಾಮೀಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News