ಜೆಡಿಎಸ್ ನಲ್ಲಿ ವ್ಯವಸ್ಥೆಯೇ ಸರಿ ಇಲ್ಲ: ಸ್ಪಪಕ್ಷದ ವಿರುದ್ಧ ಮಧು ಬಂಗಾರಪ್ಪ ಅಸಮಾಧಾನ

Update: 2020-03-02 14:52 GMT

ಬೆಂಗಳೂರು, ಮಾ.2: ರಾಜಕೀಯ ಪರಿಜ್ಞಾನ ಇಲ್ಲದ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ ಆರೋಪ ಹೊಂದಿರುವ ರಮೇಶ್ ಗೌಡ ಪರಿಷತ್ತು ಸದಸ್ಯ ಸ್ಥಾನಕ್ಕೆ ಅರ್ಹನಲ್ಲ. ಈತನನ್ನು ಈ ಕೂಡಲೇ ವಜಾಗೊಳಿಸಬೇಕೆಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಆಗ್ರಹಿಸಿದರು.

ಸೋಮವಾರ ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಬೆಂಗಳೂರು ಜಿಲ್ಲಾ ಯುವ ಘಟಕ ಅಧ್ಯಕ್ಷನಾಗಿದ್ದ ರಮೇಶ್ ಗೌಡ, ಪಕ್ಷದ ಬೆಳವಣಿಗೆ ದುಡಿದಿಲ್ಲ. ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಅಷ್ಟೇ ಅಲ್ಲದೆ, ಆತನಿಗೆ ಒಂದು ಪ್ರಶ್ನೆ ಕೇಳುವ ಪ್ರಬುದ್ಧತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಪಕ್ಷಕ್ಕಾಗಿ ದುಡಿದ, ಹಿರಿಯರು ಆದ ಕೋನರೆಡ್ಡಿ, ವೈಎಸ್‌ವಿ ದತ್ತ ಸೇರಿದಂತೆ ಅನೇಕರು ಇರುವಾಗ ರಮೇಶ್ ಗೌಡನಿಗೆ ಸ್ಥಾನ ನೀಡಿದ್ದು ಸರಿಯಲ್ಲ. ಇದರಿಂದ ಪಕ್ಷದ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಇಂತಹ ಅನೇಕ ವಿಚಾರಗಳು ತುಂಬಾ ಇದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನಸ್ಸಿಗೆ ನೋವಾಗುತ್ತದೆ ಎಂದು ನುಡಿದರು.

ಸದ್ಯದ ಪರಿಸ್ಥಿತಿಯಲ್ಲಿ ನಾನು ಪಕ್ಷದಲ್ಲಿ ಸಕ್ರಿಯ ಅಲ್ಲದ ಕಾರ್ಯಾಧ್ಯಕ್ಷ ಎಂದ ಅವರು, ಜೆಡಿಎಸ್ ನಾಯಕರನ್ನು ಸೃಷ್ಟಿ ಮಾಡುವ ಪಕ್ಷ. ಆದರೆ, ಪಕ್ಷದಲ್ಲಿ ವ್ಯವಸ್ಥೆಯೇ ಸರಿ ಇಲ್ಲ. ಯಾರೂ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ನಾಯಕರನ್ನ ಕಳೆದುಕೊಳ್ಳುತ್ತಾ ಹೋದರೆ ಪಕ್ಷ ಉಳಿಯಲಿದೆಯೇ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆ ಬಳಿಕ ನನ್ನ ವೈಯಕ್ತಿಕ ಕಾರಣಕ್ಕಾಗಿ ಮಾಧ್ಯಮಗಳಿಂದ ದೂರ ಉಳಿದಿದ್ದೆ. ಆದರೆ, ಕೆಲವೊಂದು ಕಾರಣಗಳಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಪಕ್ಷದ ಕಾರ್ಯಕರ್ತರಿಗೂ ನೋವಾಗಿದೆ. ಕಾರ್ಯಕರ್ತರಿಗೆ ಬೆಲೆಯೇ ಇಲ್ಲದಂತಾಗಿದೆ. ಇದರಿಂದಾಗಿ ಪಕ್ಷದ ಮೇಲೆ ನಂಬಿಕೆಯೇ ಹೋಗಿದೆ. ಮೈತ್ರಿ ಸರಕಾರದ ಅವಧಿಯಲ್ಲಿ ಕೆಲವರು ತಪ್ಪಾಗಿ ನಡೆದುಕೊಂಡಿದ್ದಾರೆ. ಅವರು ಯಾರೆಂದು ಮುಂದೆ ಹೇಳುತ್ತೇನೆ ಎಂದು ನುಡಿದರು.

ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಿದ್ದರೆ, ಪಕ್ಷ ಬಿಡುತ್ತಿರಲಿಲ್ಲ. ಗೋಪಾಲಯ್ಯ, ನಾರಾಯಣಗೌಡ ಬಗ್ಗೆ ಗೊತ್ತಿಲ್ಲ. ವಿಶ್ವಾಸದ ಕೊರತೆ ಕಾರಣಕ್ಕೆ ವಿಶ್ವನಾಥ್ ಪಕ್ಷ ಬಿಟ್ಟು ಹೋದರು. ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನದಿಂದ ಬೇಸರದಲ್ಲೇ ಕೆಳಗಿಳಿದರು ಎಂದು ಮಧು ಬಂಗಾರಪ್ಪಹೇಳಿದರು.

‘ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ’

ಯಾವುದೇ ರಾಜಕೀಯ ಹೊಸ ಶಕೆಯೂ ಇಲ್ಲ. ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಒಂದು ವೇಳೆ ತಾವು ಜೆಡಿಎಸ್ ಪಕ್ಷ ಬಿಟ್ಟು ಹೋಗುವ ಸಂದರ್ಭ ಬಂದರೆ ಬಹಿರಂಗವಾಗಿ ಹೇಳಿಯೇ ಹೋಗುತ್ತೇನೆ. ಏಕೆಂದರೆ ನಾನು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪನವರ ಮಗ.

-ಮಧು ಬಂಗಾರಪ್ಪ, ಜೆಡಿಎಸ್ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News