×
Ad

ಚಿಕ್ಕಮಗಳೂರು: ಮಾ.7ಕ್ಕೆ ಎನ್‌ಆರ್‌ಸಿ, ಸಿಎಎ ವಿರೋಧಿಸಿ ವಿವಿಧ ಪಕ್ಷ, ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

Update: 2020-03-02 20:26 IST

ಚಿಕ್ಕಮಗಳೂರು, ಮಾ.2: ನಗರದಲ್ಲಿ ವಿವಿಧ ಪಕ್ಷ ಸಂಘಟನೆಗಳಿಂದ ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸಿ ಮಾ.7ರಂದು ಬೃಹತ್ ಧರಣಿ ನಡೆಸಲು ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಬಿಎಸ್ಪಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾಜಿ ಸಚಿವ ಸಿ.ಆರ್.ಸಗೀರ್ ಅಹ್ಮದ್ ಮಾತನಾಡಿ, ಮಾ.7ರಂದು ನಡೆಯುವ ಹೋರಾಟ ಯಶಸ್ಸು ಕಾಣಬೇಕಾದರೆ ಎಲ್ಲಾ ರಾಜಕೀಯ ಪಕ್ಷ ಹಾಗೂ ವಿವಿಧ ಸಂಘಟನೆಯ ಮುಖಂಡರ ಶ್ರಮ ಅಗತ್ಯ. ಧರಣಿ ಹಿನ್ನೆಲೆಯಲ್ಲಿ ಒಂದು ಕೋರ್ ಸಮಿತಿ ರಚಿಸುವಂತೆ ಸಲಹೆ ನೀಡಿದ ಅವರು, ಧರಣಿ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಿ ವಿರೋಧಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ಹೋರಾಟ ಮಾಡುವುದು ನಮ್ಮ ಉದ್ದೇಶವಾಗಬೇಕು ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಇಂದಿನ ಪೂರ್ವಭಾವಿ ಸಭೆ ಮಾ.7ರಂದು ನಡೆಯುತ್ತಿರುವ ಧರಣಿಯ ವಿಶೇಷ ಸಭೆಯಾಗಿದೆ. ಎನ್‌ಆರ್‌ಸಿ ಮತ್ತು ಸಿಎಎಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ಅನ್ಯಾಯವಾಗುತ್ತಿಲ್ಲ. ದಲಿತರು, ಹಿಂದುಳಿದವರು, ಸಮಾಜದ ಎಲ್ಲ ಶೋಷಿತ ವರ್ಗದವರ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ. ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಈ ಹೋರಾಟವನ್ನು ನಿರಂತರವಾಗಿ ಮಾಡುತ್ತಾ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿ ಕೇಂದ್ರದ ಬಿಜೆಪಿ ಸರಕಾರಕ್ಕೆ ಮುಟ್ಟುವಂತೆ ಮಾಡಬೇಕು. ಜಿಲ್ಲೆಯ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಈಗಾಗಲೇ ಧರಣಿ ಸಂಬಂಧ ಕರೆ ನೀಡಲಾಗಿದೆ. ಧರಣಿಗೆ ಎಲ್ಲ ಪ್ರಗತಿಪರ, ದಲಿತ, ಕನ್ನಡ, ರೈತಪರ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳ ಸಹಸ್ರಾರು ಜನ ಸೇರುವ ನಿರೀಕ್ಷೆಯಿದ್ದು, ಎಲ್ಲಾ ಜನರ ಸಹಕಾರ ಅಗತ್ಯ ಧರಣಿಗೆ ಇದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಜಾತ್ಯತೀತ ವ್ಯವಸ್ಥೆಯನ್ನು ಕಾಪಾಡುವುದು ಎಲ್ಲ ನಾಗರಿಕರ ಕರ್ತವ್ಯ. ದೇಶದ ಐಕ್ಯತೆ ಉಳಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ಗೌರವ ಬರುವ ರೀತಿ ಹೋರಾಟವಾಗುವ ಸಂದರ್ಭ ನಾವು ಪಕ್ಷ ಬೇದ ಮರೆತು ಹೋರಾಡಬೇಕಿದೆ. ಪ್ರತಿಭಟನೆಯ ಯಶಸ್ಸಿಗೆ ಜಿಲ್ಲಾ ಕಾಂಗ್ರೆಸ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಸಿಪಿಐ ಮುಖಂಡ ಎಚ್.ಎಂ.ರೇಣುಕಾರಾಧ್ಯ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್‍ನ ಎಂ.ಎಲ್.ಮೂರ್ತಿ, ಕೆ.ಮುಹಮ್ಮದ್, ಮಂಜೇಗೌಡ, ಸಿಪಿಐನ ರಾಧಾಸುಂದರೇಶ್, ವಿಜಯ್‍ ಕುಮಾರ್, ಜೆಡಿಎಸ್‍ನ ಹೊಲದಗದ್ದೆ ಗಿರೀಶ್, ಚಂದ್ರಪ್ಪ, ನಿಸಾರ್ ಅಹ್ಮದ್, ನಸ್ರುಲ್ಲಾ ಶರೀಫ್, ಮಾನುಮಿ ರಂಡಾ, ರೈತ ಸಂಘದ ಗುರುಶಾಂತಪ್ಪ, ಎಚ್.ಎಸ್.ರಂಜನ್‍ಗೌಡ, ಗೌಸ್‍ ಮೊಹಿದ್ದೀನ್, ದಸಂಸ ಮುಖಂಡ ಶ್ರೀನಿವಾಸ್, ಅಣ್ಣಯ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News