×
Ad

ಸದನದಲ್ಲಿ ನೀಲಿಚಿತ್ರ ನೋಡುತ್ತಾರೆಂಬ ಭಯವಿದ್ದರೆ ಬುದ್ಧಿ ಹೇಳಿ, ಕ್ಯಾಮೆರಾ ನಿರ್ಬಂಧಿಸಬೇಡಿ

Update: 2020-03-02 21:26 IST

ಬೆಂಗಳೂರು, ಮಾ.2: 'ಭಾರತೀಯ ಜನತಾ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ಎನ್ನುವುದಕ್ಕೆ ವಿಧಾನಮಂಡಲದ ಕಲಾಪದ ಪ್ರತ್ಯಕ್ಷ ವರದಿ‌ ಮಾಡದಂತೆ‌ ಟಿವಿ ಚಾನೆಲ್‌ಗಳ ಮೇಲೆ ಹೇರಿರುವ ನಿರ್ಬಂಧವೇ ಸಾಕ್ಷಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಈ ಬಗ್ಗೆ 'ಮಾಧ್ಯಮ ವಿರೋಧಿ ಸರ್ಕಾರ' ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಅವರು, ವಿಧಾನಮಂಡಲದ ಕಲಾಪದ ವರದಿಗೆ ಸರ್ಕಾರಿ ಚಾನೆಲ್ ಚಂದನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರದ ಋಣದಲ್ಲಿರುವ ಆ ಚಾನೆಲ್ ವಿರೋಧ ಪಕ್ಷಗಳ ಸದಸ್ಯರ ಮುಖಗಳನ್ನು ಮರೆಮಾಚಿ ಕೇವಲ ಸಭಾಧ್ಯಕ್ಷರ ಮುಖಾರವಿಂದ ತೋರಿಸಿ ಭಜನೆ ಮಾಡುತ್ತಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದನದೊಳಗೆ ತಮ್ಮ ಸದಸ್ಯರು ನೀಲಿಚಿತ್ರ ನೋಡುತ್ತಾರೆಂಬ ಭಯ ಬಿಜೆಪಿಗೆ ಇದ್ದರೆ ಅವರಿಗೆ ಬುದ್ದಿ ಹೇಳಬೇಕೇ ಹೊರತು, ಅದಕ್ಕಾಗಿ ಟಿವಿ ಚಾನೆಲ್‌ನವರ ಕ್ಯಾಮೆರಾ ನಿರ್ಬಂಧಿಸುವುದಲ್ಲ ಎಂದು ಕುಟುಕಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಟಿವಿ ಚಾನೆಲ್‌ಗಳ ಕ್ಯಾಮೆರಾಗಳನ್ನು ನಿರ್ಬಂಧಿಸುವಂತೆ ಕೆಲವರು ಒತ್ತಾಯಿಸಿದ್ದರು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ನಾನು ಒಪ್ಪಿರಲಿಲ್ಲ. ಟಿವಿ ಚಾನೆಲ್‌ಗಳ ಕ್ಯಾಮೆರಾಗಳಿಗೆ ಏಕಪಕ್ಷೀಯವಾಗಿ ನಿರ್ಬಂಧ ಹೇರಿರುವ ಸಭಾಧ್ಯಕ್ಷರ ಮಾಧ್ಯಮ ವಿರೋಧಿ ನಡವಳಿಕೆಯ ವಿರುದ್ಧ ಮಾಧ್ಯಮ ಮಿತ್ರರು ನಡೆಸುವ ಹೋರಾಟಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News