ಉಪಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ ?

Update: 2020-03-02 16:29 GMT

ಬೆಂಗಳೂರು, ಮಾ. 2: ವಿಧಾನಸಭೆ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಜೆ.ಕೆ.ಕೃಷ್ಣಾರೆಡ್ಡಿ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದ್ದು, ಆ ಸ್ಥಾನಕ್ಕೆ ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ ಕ್ಷೇತ್ರದ ಹಿರಿಯ ಶಾಸಕ ಆನಂದ್ ಸಿ.ಮಾಮನಿ ಅವರನ್ನು ನೇಮಿಸುವ ಸಾಧ್ಯತೆಗಳಿವೆ.

ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ, ಉಪ ಸಭಾಧ್ಯಕ್ಷ ಸ್ಥಾನವನ್ನು ಪಕ್ಷದ ಹಿರಿಯ ಶಾಸಕರಿಗೆ ನೀಡುವ ಮೂಲಕ ಸಚಿವ ಸ್ಥಾನ ವಂಚಿತರನ್ನು ಸಮಾಧಾನಪಡಿಸಲು ಬಿಜೆಪಿ ತೀರ್ಮಾನಿಸಿದೆ. ಆ ಹಿನ್ನೆಲೆಯಲ್ಲಿ ಕೃಷ್ಣಾರೆಡ್ಡಿ ಅವರಿಗೆ ರಾಜೀನಾಮೆ ನೀಡುವಂತೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಮನವಿ ಮಾಡಿದ್ದಾರೆಂದು ಗೊತ್ತಾಗಿದೆ.

ಇನ್ನೂ ಕೆಲ ದಿನಗಳ ಮಟ್ಟಿಗೆ ಉಪ ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಇಂಗಿತ ಹೊಂದಿದ್ದ ಕೃಷ್ಣಾರೆಡ್ಡಿ ಅವರು, ಬಿಜೆಪಿ ಸರಕಾರದ ಒತ್ತಡದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆಂದು ಹೇಳಲಾಗಿದೆ. ಹೀಗಾಗಿ ಕೃಷ್ಣಾರೆಡ್ಡಿ ವಿರುದ್ಧ ಅವಿಶ್ವಾಸ ನೋಟಿಸ್ ನೀಡಲು ಸಿದ್ದತೆ ನಡೆಸಿದ್ದ ಬಿಜೆಪಿ ಹಿಂದೆ ಸರಿದಿದೆ.

ಕೃಷ್ಣಾರೆಡ್ಡಿ ಅವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಮಾಮನಿ ಅವರಿಗೆ ವಿಧಾನಸಭಾ ಉಪ ಸಭಾಧ್ಯಕ್ಷ ಸ್ಥಾನದ ಹಾದಿ ಸುಗಮವಾದಂತೆ ಆಗಿದೆ.

‘ಇನ್ನಾದರೂ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು, ಈಗಾಗಲೇ ಸಾಕಷ್ಟು ಬಾರಿ ಇಲ್ಲಿವರೆಗೆ ಸರಕಾರದಲ್ಲಿ ಅಧಿಕಾರ ಅನುಭವಿಸಿದವರು ಯಾವತ್ತೂ ತಾವು ಪಡೆದ ಸ್ಥಾನಮಾನ ಕಿಂಚಿತ್ತೂ ತ್ಯಜಿಸಲು ಹಿಂದೇಟು ಹಾಕುತ್ತಿರುವುದು ಒಂದೆಡೆಯಾದರೆ, ಪಕ್ಷದ ಮುಖಂಡರು ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು ಯಾವುದೇ ಆಸಕ್ತಿ ತೋರಿಸದಿರುವುದು ಇನ್ನೊಂದೆಡೆ. ಇನ್ಮೇಲೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ, ಎಂಬುದು ಯಕ್ಷಪ್ರಶ್ನೆ. ಇದು ಪಕ್ಷ ನಿಷ್ಠರಿಗೆ ಹಾಗೂ ಮತದಾರರಿಗೆ ಆದ ಘೋರ ಅಪಮಾನ ಅಲ್ಲದೇ ಇನ್ನೇನು, ಎಂಬ ವಿಚಾರ ಎಲ್ಲರಲ್ಲೂ ಸ್ಪಷ್ಟ ಮೂಡಿದೆ. ಕಾಯ್ದು ನೋಡಬೇಕು. ಆದರೆ, ಮುಂದಿನ ನಡೆ ವಿಚಾರ ಮಾಡುವಂತದ್ದು’ ಎಂದು ಆನಂದ್ ಮಾಮನಿ ತನ್ನ ಟ್ವೀಟ್ಟರ್ ಖಾತೆ ಮೂಲಕ ಪಕ್ಷದ ವರಿಷ್ಠರ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.

ಆ ಹಿನ್ನೆಲೆಯಲ್ಲಿ ಆನಂದ್ ಸಿ.ಮಾಮನಿ ಅವರಿಗೆ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನ ನೀಡುವ ಮೂಲಕ ಅವರನ್ನು ಸಮಾಧಾನಪಡಿಸುವುದು ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಕಲ್ಪಿಸಲು ಸಿಎಂ ಬಿಎಸ್‌ವೈ ಮುಂದಾಗಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News