ಧಾರವಾಡ ಜಿ.ಪಂ ಸದಸ್ಯ ಯೋಗೀಶ ಗೌಡ ಹತ್ಯೆ ಪ್ರಕರಣ: ಆರೋಪಿಗಳು 5 ದಿನ ಸಿಬಿಐ ವಶಕ್ಕೆ

Update: 2020-03-02 16:40 GMT

ಧಾರವಾಡ, ಮಾ.2: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡ ಹತ್ಯೆ ಪ್ರಕರಣ ಸಂಬಂಧ ಬಂಧಿತರಾಗಿರುವ ಆರು ಮಂದಿ ಆರೋಪಿಗಳನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ನಗರದ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಸೋಮವಾರ ಆರೋಪಿಗಳಾದ ದಿನೇಶ, ಅಶ್ವತ್ಥ, ಸುನೀಲ್ ಕುಮಾರ್, ನಾಝೀರ್ ಅಹ್ಮದ್, ಶಾ ನವಾಝ್ ಮತ್ತು ನೂತನ್‌ನನ್ನು ನ್ಯಾಯಾಲಯಕ್ಕೆ ಕರೆ ತರಲಾಯಿತು. ಬಳಿಕ ನ್ಯಾಯಾಧೀಶರ ಸೂಚನೆಯಂತೆ ತೆರದ ನ್ಯಾಯಾಲಯದಲ್ಲೇ ಆರೋಪಿಗಳಿಂದ ವಕಾಲತ್‌ಗೆ ಸಹಿ ಪಡೆದ ವಕೀಲರು ಅವರ ಪರವಾಗಿ ವಕಾಲತ್ ಸಲ್ಲಿಸಿದರು.

ಆರೋಪಿಗಳ ಹೆಚ್ಚಿನ ವಿಚಾರಣೆ ಅಗತ್ಯ ಎನ್ನುವ ಸಿಬಿಐ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶೆ ವಿಜಯಲಕ್ಷ್ಮೀ ಗಾಣಾಪುರ, ಆರೋಪಿಗಳನ್ನು ಮಾ.7ರವರೆಗೆ ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಿ ಆದೇಶ ಹೊರಡಿಸಿದರು.

ಏನಿದು ಪ್ರಕರಣ?: 2016ರ ಜೂ.15ರಂದು ಧಾರವಾಡದ ಸಪ್ತಾಪುರದ ಜಿಮ್‌ನಲ್ಲಿ ಯೋಗೀಶಗೌಡ ಗೌಡ ಅವರನ್ನು ಅಪರಿಚಿತರು ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಿತ್ತು. ಕಾರ್ಯಾಚರಣೆ ತೀವ್ರಗೊಳಿಸಿದ ಸಿಬಿಐ ಅಧಿಕಾರಿಗಳು ತಮಗೆ ದೊರೆತ ಮಾಹಿತಿ ಆಧಾರದಲ್ಲಿ ರವಿವಾರ ಬೆಂಗಳೂರಿನಲ್ಲಿ ಆರು ಆರೋಪಿಗಳನ್ನು ವಶಕ್ಕೆ ಪಡೆದು, ಧಾರವಾಡ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News